ಮದ್ದಲೆ ವಾದನದಲ್ಲಿ ‘ನಂಬರ್ ೧’ ಶಂಕರ ಭಾಗವತ್: ಕೆರೇಕೈ

Aug 25, 2026 - 12:02
 0  35
ಮದ್ದಲೆ ವಾದನದಲ್ಲಿ ‘ನಂಬರ್ ೧’ ಶಂಕರ ಭಾಗವತ್: ಕೆರೇಕೈ

ಆಪ್ತ ನ್ಯೂಸ್ ಶಿರಸಿ:

ಯಕ್ಷಗಾನ ಮದ್ದಲೆ ವಾದನ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ಕಲಾವಿದ ಶಂಕರ ಭಾಗವತ್ ಅವರ ಕಲಾ ಸೇವೆ ಹಾಗೂ ಸಾಧನೆ ಶ್ಲಾಘನೀಯ ಎಂದು ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.

ನಗರದ ರಂಗಧಾಮದ ನಮ್ಮದಿ ಆವರಣದಲ್ಲಿ ನಾದಶಂಕರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕೂಚಿಪುಡಿ ಹಾಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಲಾ ಕ್ಷೇತ್ರದಲ್ಲಿ ದೀರ್ಘಕಾಲ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಶಂಕರ ಭಾಗವತ್ ಅವರು ಸುಮಾರು 30 ವರ್ಷಗಳಿಂದ ಮದ್ದಲೆ ವಾದನದಲ್ಲಿ ತಮ್ಮದೇ ಆದ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ ಎಂದರು.

“ಮದ್ದಲೆ ವಾದನದಲ್ಲಿ ಶಂಕರ ಭಾಗವತ್ ನಂಬರ್ ೧” ಎಂದು ಬಣ್ಣಿಸಿದ ಕೆರೇಕೈ, ತಮ್ಮ ವಿಶಿಷ್ಟ ವಾದನ ಶೈಲಿ, ಸೂರಿನ ಮೇಲಿನ ಹಿಡಿತ ಹಾಗೂ ಯಕ್ಷಗಾನದ ಭಾವಕ್ಕೆ ತಕ್ಕಂತೆ ನಾದವನ್ನು ಕಟ್ಟಿಕೊಡುವ ಸಾಮರ್ಥ್ಯದ ಮೂಲಕ ಶಂಕರ ಭಾಗವತ್ ಅವರು ಕಲಾರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ನಾದದಿಂದ ಶಂಕರ ಇನ್ನಷ್ಟು ಬೆಳೆಯಬೇಕು. ಅವರ ಕಲಾ ಪಯಣ ಮತ್ತಷ್ಟು ಎತ್ತರಕ್ಕೆ ಸಾಗಬೇಕು. ಕಲಾವಿದರಿಗೆ ನೆಮ್ಮದಿ ಹಾಗೂ ಸೃಜನಶೀಲತೆಗೆ ಅವಕಾಶ ನೀಡುವ ವೇದಿಕೆಯಾಗಿ ನಾದಶಂಕರ ಬೆಳೆಯಲಿ” ಎಂದು ಅವರು ಹಾರೈಸಿದರು.

ಕಲೆಗಳ ಸಂಗಮಕ್ಕೆ ನಾದಶಂಕರ ವೇದಿಕೆ

ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹಿರೇಕೈ ಮಾತನಾಡಿ, ಯಕ್ಷಗಾನದಂತಹ ಸಾಂಪ್ರದಾಯಿಕ ಕಲಾ ಪ್ರಕಾರದೊಂದಿಗೆ ಶಾಸ್ತ್ರೀಯ ನೃತ್ಯವನ್ನೂ ಒಂದೇ ವೇದಿಕೆಯಲ್ಲಿ ಪರಿಚಯಿಸುವ ನಾದಶಂಕರ ಟ್ರಸ್ಟ್‌ನ ಪ್ರಯತ್ನ ವಿಶಿಷ್ಟವಾಗಿದೆ ಎಂದರು.

ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ. ಇಂತಹ ಪ್ರಯತ್ನಗಳು ಕಲೆಯ ಉಳಿವು ಮತ್ತು ಬೆಳವಣಿಗೆಗೆ ಪೂರಕವಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವೈಶಾಲಿ ವಿ.ಪಿ. ಹೆಗಡೆ, ದರ್ಶನ್ ಭಾಗವತ್, ಶಿಲ್ಪಾ ಭಾಗ್ವತ್, ಪೂಜಾ ಹೆಗಡೆ, ವಿನಾಯಕ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಶ್ವಿನಿ ಗಿರೀಶ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಕುಮಾರಿ ವಘಿಷಾ ಹಾಗೂ ಪೂರ್ವಿ ಪ್ರಾರ್ಥಿಸಿದರು. ನಾದಶಂಕರ ಟ್ರಸ್ಟ್ ಅಧ್ಯಕ್ಷ ಹಾಗೂ ಕಲಾವಿದ ಶಂಕರ ಭಾಗವತ್ ಸ್ವಾಗತಿಸಿದರು. ಸುಜಾತ ದಂಟಕಲ್ ಕಾರ್ಯಕ್ರಮ ನಿರ್ವಹಿಸಿದರು. ವಿನೋದಾ ಭಾಗವತ್ ವಂದಿಸಿದರು.

ಕೂಚಿಪುಡಿ ನೃತ್ಯ, ‘ಸುದರ್ಶನ ವಿಜಯ’ ಮೆರುಗು

ಕಾರ್ಯಕ್ರಮದ ಸಾಂಸ್ಕೃತಿಕ ಭಾಗದಲ್ಲಿ ಗುರು ಅಶ್ವಿನಿ ಭಟ್ಟ ಹಾಗೂ ಅವರ ಶಿಷ್ಯರಾದ ಪೂರ್ವಿ ಡಿ. ಭಾಗ್ವತ್ ಮತ್ತು ವಘೀಶಾ ಸತೀಶಕುಮಾರ್ ಅವರ ಕೂಚಿಪುಡಿ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಶಾಸ್ತ್ರೀಯ ನೃತ್ಯದ ಲಯ, ಭಾವ ಹಾಗೂ ಅಭಿನಯದ ಮೂಲಕ ಕಲಾವಿದರು ವೇದಿಕೆಗೆ ವಿಶೇಷ ಮೆರುಗು ತಂದರು.

ನಂತರ ನಡೆದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಭಾಗವತರಾಗಿ ಸತೀಶ ಹೆಗಡೆ ದಂಟಕಲ್ ಹಾಗೂ ನಂದನ ಹೆಗಡೆ ದಂಟಕಲ್, ಮದ್ದಲೆಯಲ್ಲಿ ಯಲ್ಲಾಪುರದ ಶಂಕರ ಭಾಗವತ್ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಗೌಡ ಭಾಗವಹಿಸಿದರು.

ಮುಮ್ಮೇಳದಲ್ಲಿ ನಿರಂಜನ ಜಾಗನಳ್ಳಿ, ಪ್ರವೀಣ ತಟ್ಟಿಸರ, ನಿತಿನ್ ಹೆಗಡೆ ದಂಟಕಲ್, ದೀಪಕ್ ಕುಂಕಿ ಸೇರಿದಂತೆ ಹಲವು ಕಲಾವಿದರು ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನಕ್ಕೆ ಜೀವ ತುಂಬಿದರು.

ಮೂರು ದಶಕಗಳ ಕಲಾ ಪಯಣದ ಅನುಭವವನ್ನು ಮದ್ದಲೆಯ ನಾದದಲ್ಲಿ ಕಟ್ಟಿಕೊಟ್ಟ ಶಂಕರ ಭಾಗವತ್ ಅವರ ವಾದನ, ಯಕ್ಷಗಾನ ಪ್ರದರ್ಶನಕ್ಕೆ ಮತ್ತಷ್ಟು ಜೀವಂತಿಕೆ ನೀಡಿತು. ಪರಂಪರೆ ಮತ್ತು ಹೊಸ ತಲೆಮಾರಿನ ಪ್ರತಿಭೆಗಳ ಸಂಗಮಕ್ಕೆ ಸಾಕ್ಷಿಯಾದ ನಾದಶಂಕರದ ಈ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0