ಅಮಿತ್ ಶಾ ಭೇಟಿಯಾದ ಸಂಸದ ಕಾಗೇರಿ; ಅಕ್ರಮ ಅಡಿಕೆ ಆಮದು ತಡೆಗೆ ಕಠಿಣ ಕ್ರಮಕ್ಕೆ ಮನವಿ
ಆಪ್ತ ನ್ಯೂಸ್ ನವದೆಹಲಿ:
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅಡಿಕೆ ಬೆಳೆಗಾರರು ಹಾಗೂ ಅಡಿಕೆ ಸಹಕಾರ ಸಂಘಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿತು.
ಭೇಟಿಯ ವೇಳೆ ವಿದೇಶಗಳಿಂದ ಕಾನೂನುಬಾಹಿರವಾಗಿ ದೇಶದೊಳಗೆ ಅಕ್ರಮವಾಗಿ ಆಮದು ಆಗುತ್ತಿರುವ ಅಡಿಕೆಯನ್ನು ತಡೆಹಿಡಿಯಲು ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಅಕ್ರಮ ಅಡಿಕೆ ಆಮದು ದೇಶೀಯ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದರ ನೇರ ಹೊರೆ ಅಡಿಕೆ ಬೆಳೆಗಾರರ ಮೇಲೆ ಬೀಳುತ್ತಿದೆ ಎಂದು ನಿಯೋಗವು ಸಚಿವರ ಗಮನಕ್ಕೆ ತಂದಿತು.
ಅಲ್ಲದೆ, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸದಾ ಬೆಂಬಲವಾಗಿ ನಿಂತಿರುವ ಅಡಿಕೆ ಸಹಕಾರ ಸಂಘಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಸಹಕಾರ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ನಿಯೋಗದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಭೇಟಿ ಮಹತ್ವದ್ದಾಗಿದ್ದು, ಅಕ್ರಮ ಅಡಿಕೆ ಆಮದು ನಿಯಂತ್ರಣ ಹಾಗೂ ಸಹಕಾರ ಸಂಘಗಳ ಬಲವರ್ಧನೆ ಕುರಿತು ಕೇಂದ್ರದಿಂದ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯನ್ನು ನಿಯೋಗ ವ್ಯಕ್ತಪಡಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



