ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾದ ನಂದನ್ ಭಟ್‌ಗೆ ಅನಂತಮೂರ್ತಿ ಹೆಗಡೆ ವೈಯಕ್ತಿಕ ನೆರವು; ಜಿಲ್ಲೆಯ ಯುವ ಸಾಧಕನಿಗೆ ಅಭಿನಂದನೆ

Aug 7, 2026 - 11:07
 0  35
ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾದ ನಂದನ್ ಭಟ್‌ಗೆ ಅನಂತಮೂರ್ತಿ ಹೆಗಡೆ ವೈಯಕ್ತಿಕ ನೆರವು; ಜಿಲ್ಲೆಯ ಯುವ ಸಾಧಕನಿಗೆ ಅಭಿನಂದನೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಯುವ ಯೋಗ ಪ್ರತಿಭೆ ನಂದನ್ ನರಸಿಂಹ ಭಟ್ ಅವರು ಏಷ್ಯಾ ಫೆಸಿಫಿಕ್ ಯೋಗ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ವೈಯಕ್ತಿಕವಾಗಿ ಅಭಿನಂದಿಸಿ, ತಮ್ಮ ಸ್ವಂತ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಿದರು. ಜಿಲ್ಲೆಯ ಹೆಮ್ಮೆಯ ಯುವ ಸಾಧಕನಿಗೆ ಶುಭ ಹಾರೈಸಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, "ಯೋಗ ಕ್ಷೇತ್ರದಲ್ಲಿ ನಂದನ್ ನರಸಿಂಹ ಭಟ್ ಅತ್ಯುತ್ತಮ ಸಾಧನೆ ಮಾಡಿ, ಈಗ ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ. ಇಂತಹ ಪ್ರತಿಭಾವಂತ ಯುವಕರಿಗೆ ಸಮಾಜದ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕು. ಅವರ ಸಾಧನೆ ಇತರ ಯುವಕರಿಗೂ ಸ್ಫೂರ್ತಿಯಾಗಲಿ," ಎಂದು ಹೇಳಿದರು.

ಮುಂದಿನ ಸೆಪ್ಟೆಂಬರ್ 4ರಿಂದ 9ರವರೆಗೆ ನಡೆಯಲಿರುವ ಏಷ್ಯಾ ಫೆಸಿಫಿಕ್ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಕರ್ನಾಟಕದ ಕೆಲವೇ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಅವರಲ್ಲಿ ಉತ್ತರ ಕನ್ನಡ ಜಿಲ್ಲೆಯ ನಂದನ್ ಭಟ್ ಕೂಡ ಸ್ಥಾನ ಪಡೆದಿರುವುದು ವಿಶೇಷ ಎಂದು ಅವರು ತಿಳಿಸಿದರು.

"ನಮ್ಮ ಜಿಲ್ಲೆಯಿಂದ ಹಾಗೂ ರಾಜ್ಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಯೋಗ ಪ್ರತಿಭೆಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಅವರು ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ," ಎಂದು ಹಾರೈಸಿದರು.

ರಾಜ್ಯದಿಂದ ರಾಷ್ಟ್ರ ಮಟ್ಟ, ಈಗ ಅಂತಾರಾಷ್ಟ್ರೀಯ ವೇದಿಕೆ

ಈ ವೇಳೆ ಮಾತನಾಡಿದ ನಂದನ್ ನರಸಿಂಹ ಭಟ್, ತಮ್ಮ ಸಾಧನೆಯ ಪಯಣವನ್ನು ಹಂಚಿಕೊಂಡರು.

"ಮೊದಲು ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದೆ. ನಂತರ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲೂ ಮೊದಲ ಸ್ಥಾನ ಗಳಿಸಿದೆ. ಈಗ ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವುದು ಜೀವನದ ಅತ್ಯಂತ ಸಂತಸದ ಕ್ಷಣವಾಗಿದೆ," ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ ಅವರು, ಈ ಸಾಧನೆಯ ಹಿಂದೆ ತಮ್ಮ ತಂದೆ-ತಾಯಿಯ ಅಪಾರ ಬೆಂಬಲವಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

"ಯೋಗ ಸ್ಪರ್ಧೆಗಳಿಗಾಗಿ ದೂರದ ಊರುಗಳಿಗೆ ನನ್ನನ್ನು ಕರೆದುಕೊಂಡು ಹೋಗಿ ಪ್ರೋತ್ಸಾಹಿಸಿದ ತಂದೆ-ತಾಯಿಯ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯೋಗಾಭ್ಯಾಸ ಆರಂಭಿಸಿದ ನಂತರ ನನ್ನ ಮನಸ್ಸಿನ ಏಕಾಗ್ರತೆ ಹೆಚ್ಚಾಗಿದೆ. ಓದಿನಲ್ಲೂ ಉತ್ತಮ ಫಲಿತಾಂಶ ಪಡೆಯಲು ಯೋಗ ಬಹಳ ಸಹಕಾರಿಯಾಗಿದೆ," ಎಂದು ಹೇಳಿದರು.

ಮುಂದೆ ಬಿ.ಎಸ್‌.ಸಿ. ಯೋಗ ಶಿಕ್ಷಣ ಪಡೆದು ಇದೇ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಕನಸನ್ನು ಹೊಂದಿರುವುದಾಗಿ ನಂದನ್ ತಿಳಿಸಿದರು.

ಯುವಕರಿಗೆ ಸ್ಪೂರ್ತಿಯಾದ ಸಾಧನೆ

ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ, ಅಲ್ಲಿಂದ ಏಷ್ಯಾ ಫೆಸಿಫಿಕ್ ಅಂತರರಾಷ್ಟ್ರೀಯ ಸ್ಪರ್ಧೆಯವರೆಗೆ ನಂದನ್ ನರಸಿಂಹ ಭಟ್ ಅವರ ಪಯಣ ಉತ್ತರ ಕನ್ನಡ ಜಿಲ್ಲೆಯ ಯುವ ಪ್ರತಿಭೆಗಳ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅವರ ಸಾಧನೆ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಯೋಗದ ಮೂಲಕ ಆರೋಗ್ಯ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಯುವಪೀಳಿಗೆಗೆ ಸ್ಪೂರ್ತಿಯಾಗುವಂತಿದೆ.

ಇದೀಗ ಎಲ್ಲರ ನಿರೀಕ್ಷೆಯೂ ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ನಂದನ್ ಉತ್ತಮ ಪ್ರದರ್ಶನ ನೀಡಿ ಭಾರತ, ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0