ಜಯರಾಮ ಹೆಗಡೆಯವರ 'ನೂರಾರು ರೂಪಕರು' ಚುಟುಕು ಸಂಕಲನ ಲೋಕಾರ್ಪಣೆ
84ನೇ ವಯಸ್ಸಿನಲ್ಲೂ ಅಕ್ಷರಸಾಧನೆ ಮುಂದುವರಿಸಿದ ಹಿರಿಯ ಪತ್ರಕರ್ತರಿಗೆ ಸಾಹಿತ್ಯ ವಲಯದ ಅಭಿನಂದನೆ
ಆಪ್ತ ನ್ಯೂಸ್ ಶಿರಸಿ:
ಸಾಹಿತ್ಯ ಸಂಚಲನ ಹಾಗೂ ನೆಮ್ಮದಿ ಕುಟೀರದ 'ಮಾಸದ ಮಾತು' ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಯರಾಮ ಹೆಗಡೆಯವರ 'ನೂರಾರು ರೂಪಕರು' ಚುಟುಕು ಸಂಕಲನದ ಲೋಕಾರ್ಪಣೆ ಸಮಾರಂಭವು ಶಿರಸಿಯ ನೆಮ್ಮದಿ ಕುಟೀರದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಸಾಹಿತ್ಯಾಸಕ್ತರು, ಹಿರಿಯ ಸಾಹಿತಿಗಳು, ಪತ್ರಕರ್ತರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವು ಸಾಹಿತ್ಯದ ಮಹತ್ವವನ್ನು ಸಾರುವ ವೇದಿಕೆಯಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಆರ್.ಡಿ. ಹೆಗಡೆ (ಆಲ್ಮನೆ) ವಹಿಸಿ ಮಾತನಾಡಿ, ವ್ಯಕ್ತಿತ್ವಗಳನ್ನು ಕೇವಲ ಕೆಲವು ಸಾಲುಗಳ ಚುಟುಕು ಚೌಪದಿಗಳ ಮೂಲಕ ಓದುಗರ ಮುಂದಿಡುವುದು ಸುಲಭದ ಕೆಲಸವಲ್ಲ. ಆದರೆ ಜಯರಾಮ ಹೆಗಡೆಯವರು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶ್ವದ ಹಲವು ಗಣ್ಯರ ವ್ಯಕ್ತಿತ್ವವನ್ನು ಲಯಬದ್ಧ, ಪ್ರಾಸಯುಕ್ತ ಮತ್ತು ಛಂದೋಬದ್ಧ ಚುಟುಕುಗಳ ಮೂಲಕ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಸಮಾಜದ ಪ್ರಮುಖ ವ್ಯಕ್ತಿಗಳನ್ನು ನೇರನೋಟದ ಮೂಲಕ ಗ್ರಹಿಸಿ ಸಾಹಿತ್ಯ ರೂಪದಲ್ಲಿ ಪರಿಚಯಿಸಿರುವುದು ಈ ಕೃತಿಯ ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಜಯರಾಮ ಹೆಗಡೆಯವರು ಪತ್ರಿಕಾ ಕ್ಷೇತ್ರದಲ್ಲಿ ಅತ್ಯಂತ ಸರಳ, ಸಜ್ಜನ ಹಾಗೂ ಅಕ್ಷರವನ್ನು ಆರಾಧಿಸುವ ಪತ್ರಕರ್ತರಾಗಿದ್ದಾರೆ. ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯದ ಮೂಲಕ ಸಮಾಜದಲ್ಲಿ ಪ್ರೀತಿ, ಮೌಲ್ಯಗಳು ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹಂಚುವ ಸಾಹಿತಿಗಳ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.
ಹಿರಿಯ ಬರಹಗಾರ ಪ್ರೊ. ಜಿ.ಎ. ಹೆಗಡೆ (ಸೋಂದಾ) ಕೃತಿ ಪರಿಚಯಿಸಿ, ಅಕ್ಷರಗಳ ಆಸರೆಯಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿರುವ ಜಯರಾಮ ಹೆಗಡೆಯವರು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ವಿಶ್ವದ 140ಕ್ಕೂ ಹೆಚ್ಚು ಸಾಧಕರ ವ್ಯಕ್ತಿತ್ವವನ್ನು ಚುಟುಕುಗಳ ರೂಪದಲ್ಲಿ ಕಟ್ಟಿಕೊಟ್ಟಿರುವುದು ಅಪರೂಪದ ಸಾಹಿತ್ಯ ಸಾಧನೆ ಎಂದರು. ಈ ಕೃತಿಯ ಬಹುತೇಕ ಚುಟುಕುಗಳು ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, 84ನೇ ವಯಸ್ಸಿನಲ್ಲಿಯೂ ಅವರ ಸಾಹಿತ್ಯಾಸಕ್ತಿ ಯುವ ಬರಹಗಾರರನ್ನೇ ನಾಚಿಸುವಂತಿದೆ ಎಂದು ಪ್ರಶಂಸಿಸಿದರು.
ಕೃತಿಕಾರ ಜಯರಾಮ ಹೆಗಡೆ ಮಾತನಾಡಿ, ಕಾಲೇಜು ದಿನಗಳಲ್ಲಿಯೇ ವಿವಿಧ ಕ್ಷೇತ್ರಗಳ ವಿಶಿಷ್ಟ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಕುರಿತು ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತು. ಸುಮಾರು ಆರು ದಶಕಗಳ ನಂತರ ಅದೇ ಸಾಹಿತ್ಯಯಾತ್ರೆಯನ್ನು ಮತ್ತೆ ಮುಂದುವರಿಸಿದ್ದು, ಓದುಗರು ಈ ಕೃತಿಯನ್ನು ಪ್ರೀತಿಯಿಂದ ಸ್ವೀಕರಿಸಿದರೆ ತಮ್ಮ ಬರವಣಿಗೆ ಸಾರ್ಥಕವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಸ್.ಎಂ. ಹೆಗಡೆ ಪ್ರಾರ್ಥನೆ ಸಲ್ಲಿಸಿದರು. ಬರಹಗಾರ ದತ್ತಗುರು ಕಂಠಿ ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಕವಿ ವಾಸುದೇವ ಶಾನಭಾಗ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಸಿಂಚನಾ ಹೆಗಡೆ ಕಾರ್ಯಕ್ರಮಕ್ಕೆ ಸಹಕರಿಸಿದರೆ, ಕವಯತ್ರಿ ಸಿಂಧು ಹೆಗಡೆ ವಂದನಾರ್ಪಣೆ ಸಲ್ಲಿಸಿದರು.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಮುಖಿ ಚಿಂತನೆಗಳ ಸಂಗಮವಾಗಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಯರಾಮ ಹೆಗಡೆಯವರ ಅಕ್ಷರಪ್ರೀತಿ ಹಾಗೂ ಸಾಹಿತ್ಯ ಸೇವೆಯನ್ನು ಗಣ್ಯರು ಕೊಂಡಾಡಿದರು. "ನೂರಾರು ರೂಪಕರು" ಕೃತಿ ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡುವ ಪ್ರಯತ್ನವಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರ ಬದುಕು ಮತ್ತು ಸಾಧನೆಯನ್ನು ಸಂಕ್ಷಿಪ್ತವಾಗಿ, ಕಾವ್ಯಾತ್ಮಕವಾಗಿ ಪರಿಚಯಿಸುವ ವಿಶಿಷ್ಟ ಸಂಕಲನ ಎಂಬ ಅಭಿಪ್ರಾಯ ಕಾರ್ಯಕ್ರಮದುದ್ದಕ್ಕೂ ವ್ಯಕ್ತವಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



