ಆಧ್ಯಾತ್ಮ ಮತ್ತು ಆರೋಗ್ಯ ಹೂವು-ಪರಿಮಳದಂತೆ ಅವಿನಾಭಾವ; ಮನಸ್ಸಿನ ಸ್ಥಿರತೆಯೇ ಸುಖೀ ಜೀವನದ ಗುಟ್ಟು: ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
ಆಪ್ತ ನ್ಯೂಸ್ ಶಿರಸಿ:
ಆಧ್ಯಾತ್ಮ ಮತ್ತು ಆರೋಗ್ಯವು ಹೂವು ಹಾಗೂ ಅದರ ಪರಿಮಳದಂತೆ ಒಂದಕ್ಕೊಂದು ಪೂರಕವಾಗಿದ್ದು, ಮನಸ್ಸನ್ನು ಬಾಹ್ಯ ವಿಷಯಗಳಿಂದ ಅಂತರಂಗದತ್ತ ತಿರುಗಿಸುವುದೇ ನಿಜವಾದ ಆಧ್ಯಾತ್ಮ ಎಂದು ಬೆಂಗಳೂರಿನ ವಿಭೂತಿಪುರ ಮಠದ ಡಾ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಗಣೇಶನಗರದಲ್ಲಿರುವ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಗುರುವಂದನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಆಧ್ಯಾತ್ಮಿಕತೆಯನ್ನು ಬೇರ್ಪಡಿಸಿ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಇವೆರಡೂ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಒಂದಿಲ್ಲದೆ ಮತ್ತೊಂದು ಸಂಪೂರ್ಣವಾಗುವುದಿಲ್ಲ ಎಂದು ಹೇಳಿದರು.
ಆಧ್ಯಾತ್ಮ ಎಂದರೆ ಸಂಸಾರ ತ್ಯಜಿಸುವುದಲ್ಲ
ಆಧ್ಯಾತ್ಮವೆಂದರೆ ಸಂಸಾರವನ್ನು ಬಿಟ್ಟು ಕಾಡಿಗೆ ತೆರಳುವುದು ಅಥವಾ ಲೋಕವ್ಯವಹಾರಗಳಿಂದ ದೂರ ಉಳಿಯುವುದಲ್ಲ. ಮನುಷ್ಯನ ಮನಸ್ಸು ಸದಾ ಶಬ್ದ, ಸ್ಪರ್ಶ, ರೂಪ, ರಸ ಹಾಗೂ ಗಂಧ ಎಂಬ ಪಂಚವಿಷಯಗಳ ಹಿಂದೆ ಓಡುತ್ತಿರುತ್ತದೆ. ಆ ಮನಸ್ಸನ್ನು ಅಂತರಂಗದತ್ತ ತಿರುಗಿಸಿ ಆತ್ಮಾವಲೋಕನ ಮಾಡುವುದೇ ನಿಜವಾದ ಆಧ್ಯಾತ್ಮಿಕ ಸಾಧನೆ ಎಂದು ಅವರು ವಿವರಿಸಿದರು.
ಮನಸ್ಸು ನಿತ್ಯವೂ ಅಂತರಂಗದತ್ತ ಮುಖ ಮಾಡಿದಾಗ ಮಾತ್ರ ಜೀವನದಲ್ಲಿ ನೆಮ್ಮದಿ, ಆರೋಗ್ಯ ಹಾಗೂ ಸಂತೃಪ್ತಿ ನೆಲೆಸುತ್ತದೆ. ಸಂಸಾರದಲ್ಲಿದ್ದರೂ ಅದರ ಬಂಧನಕ್ಕೆ ಒಳಗಾಗದೇ ಬದುಕುವ ಕಲೆ ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೇಳಿದರು.
ಮನಸ್ಸೇ ಬಂಧನಕ್ಕೂ, ಮೋಕ್ಷಕ್ಕೂ ಕಾರಣ
ಸಂಸಾರವು ಬಂಧನವಾಗುವುದಕ್ಕೂ, ಮೋಕ್ಷದತ್ತ ಸಾಗುವುದಕ್ಕೂ ಮನಸ್ಸೇ ಪ್ರಮುಖ ಕಾರಣವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅತ್ಯಂತ ಮುಖ್ಯವಾಗಿದ್ದು, ಮನಸ್ಸಿನ ಸ್ಥಿರತೆ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಸಾಧ್ಯವಿಲ್ಲ ಎಂದು ಸ್ವಾಮೀಜಿ ತಿಳಿಸಿದರು.
ಮಠಾಧೀಶರು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕಾರಣ ಅವರು ಸಹ ಅಪಾರ ಜವಾಬ್ದಾರಿಗಳನ್ನು ಹೊತ್ತ ಸಂಸಾರಿಗಳೇ ಆಗಿದ್ದಾರೆ. ಆದರೆ ಜವಾಬ್ದಾರಿಗಳ ಮಧ್ಯೆಯೂ ಆಸಕ್ತಿ-ಆಸಕ್ತಿಗಳ ಬಂಧನಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸುವುದು ನಿಜವಾದ ಆಧ್ಯಾತ್ಮಿಕ ಬದುಕಿನ ಲಕ್ಷಣ ಎಂದು ಹೇಳಿದರು.
ನಿಸರ್ಗಮನೆಯ ಸೇವೆಗೆ ಮೆಚ್ಚುಗೆ
ನಿಸರ್ಗಮನೆಯು ಇಂದು ರಾಜ್ಯದಾದ್ಯಂತ ಗುರುತಿಸಿಕೊಂಡಿರುವುದು ಕೇವಲ ಡಾ. ವೆಂಕಟರಮಣ ಹೆಗಡೆ ಅವರೊಬ್ಬರ ಪ್ರಯತ್ನದಿಂದಲ್ಲ. ಅವರ ಇಡೀ ಕುಟುಂಬದ ಸೇವಾಭಾವ, ಸಮರ್ಪಣೆ ಹಾಗೂ ಆಸ್ಪತ್ರೆಯ ಶಿಸ್ತುಬದ್ಧ ವ್ಯವಸ್ಥೆಯೇ ಅದರ ಯಶಸ್ಸಿಗೆ ಕಾರಣವಾಗಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ತಂದ ನಿಸರ್ಗಮನೆ
ಹುಕ್ಕೇರಿಯ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿವಿಧ ಮಠಗಳ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ನಿಸರ್ಗಮನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಹಿಂದೆ 60ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಇತಿಹಾಸ ನಿರ್ಮಿಸಿದ್ದರು. ಈ ಬಾರಿಯೂ ಎಂಟು ಮಠಗಳ ಸ್ವಾಮೀಜಿಗಳು ಭಾಗವಹಿಸಿರುವುದು ಸತ್ಸಂಗಕ್ಕೆ ವಿಶೇಷ ಮೆರುಗು ತಂದಿದೆ ಎಂದು ಹೇಳಿದರು.
ಬದಲಾಗುತ್ತಿರುವ ಜೀವನಶೈಲಿ ಆರೋಗ್ಯದ ಮೇಲೂ ಪರಿಣಾಮ
ಕೊಟ್ಟೂರಿನ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ಅಭಿರುಚಿ ಮತ್ತು ಆಹಾರ ಪದ್ಧತಿಗಳು ಬದಲಾಗುತ್ತಿರುವ ಪರಿಣಾಮ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಸಿಟ್ಟು, ಕೋಪ ಹಾಗೂ ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ. ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಒಳಗಿನ ಪ್ರಕೃತಿಯೂ ಅಷ್ಟೇ ಮುಖ್ಯ
ಯಾದಗಿರಿ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೊರಗಿನ ಪ್ರಕೃತಿಯ ಸಂರಕ್ಷಣೆಯಷ್ಟೇ ಮನುಷ್ಯನೊಳಗಿನ ಪ್ರಕೃತಿಯನ್ನು ಕಾಪಾಡಿಕೊಳ್ಳುವುದೂ ಅಗತ್ಯವಾಗಿದೆ. ಗುರುಗಳ ಪ್ರೇರಣೆಯೇ ತಮ್ಮ ಜೀವನದ ದಾರಿದೀಪವಾಗಿದೆ ಎಂದು ಹೇಳಿದರು.
ಪ್ರಾಮಾಣಿಕ ಸೇವೆಯೇ ನಿಸರ್ಗಮನೆಯ ಶಕ್ತಿ
ಹೆಡಗೆ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದಲ್ಲಿ ಪದವಿ ಪಡೆದವರ ಸಂಖ್ಯೆ ಹೆಚ್ಚಾದರೂ ಪರಿಣಿತಿ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡವರ ಸಂಖ್ಯೆ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಸರ್ಗಮನೆಯಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಇಂದು ಆರೋಗ್ಯ ಕೇಂದ್ರ ಮಾತ್ರವಲ್ಲ, ಗುರುಮನೆಯಾಗಿ ರೂಪುಗೊಂಡಿದೆ. ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯ ಮನುಷ್ಯನ ಸಮಗ್ರ ಬದುಕಿಗೆ ಅತ್ಯಗತ್ಯ ಎಂದರು.
ಹಲವಾರು ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಶ್ರೀ ಕುಮಾರಸ್ವಾಮೀಜಿ, ಡಾ. ವೆಂಕಟರಮಣ ಹೆಗಡೆ, ನಾರಾಯಣ ಹೆಗಡೆ, ಭವಾನಿ ಹೆಗಡೆ, ಸಂಗೀತಾ ಹೆಗಡೆ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಮುಖ್ಯಾಂಶಗಳು
"ಹೊಟ್ಟೆ ಎದೆಗಿಂತ ಮುಂದೆ ಬರಬಾರದು"
"ಹೊಟ್ಟೆ ನಮ್ಮ ಎದೆಗಿಂತ ಮುಂದೆ ಬರದಂತೆ ನೋಡಿಕೊಂಡರೆ ನೂರು ವರ್ಷ ಸುಖವಾಗಿ ಬದುಕಬಹುದು. ಹೊಟ್ಟೆ ಬೆಳೆದರೆ ಅನಾರೋಗ್ಯವೂ ಬೆಳೆಯುತ್ತದೆ. ಅಡುಗೆ ಮನೆಯನ್ನೇ ಔಷಧಾಲಯವನ್ನಾಗಿ ಮಾಡಬೇಕು ಎಂದು ಡಾ. ವೆಂಕಟರಮಣ ಹೆಗಡೆ ಸದಾ ಹೇಳುತ್ತಾರೆ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ಜೀವನಶೈಲಿ ಹಾಗೂ ಆಧ್ಯಾತ್ಮಿಕ ಚಿಂತನೆ ಒಂದಾದಾಗ ಉತ್ತಮ ಆರೋಗ್ಯ ಸಾಧ್ಯ. ಧಾರ್ಮಿಕ ಕ್ಷೇತ್ರದ ಸಾಧಕರಿಗೂ ಉತ್ತಮ ಆರೋಗ್ಯ ಅತ್ಯಗತ್ಯ."
– ಡಾ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರ ಮಠ
"ಭಜನೆ, ಪ್ರಾರ್ಥನೆ ಮತ್ತು ಧ್ಯಾನದ ಮಹತ್ವ"
"ಭಜನೆಯು ಭಗವಂತನತ್ತ ಕೊಂಡೊಯ್ಯುವ ಮಾರ್ಗವಾದರೆ, ಪ್ರಾರ್ಥನೆಯು ಭಗವಂತನೊಂದಿಗೆ ಸಂವಾದ ನಡೆಸುವುದು. ಧ್ಯಾನವು ಭಗವಂತನು ಮನುಷ್ಯನೊಂದಿಗೆ ಮಾತನಾಡುವ ಅನುಭವವಾಗಿದೆ."
– ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



