ಅಕ್ರಮ ಶ್ರೀಗಂಧ ಕೆತ್ತನೆ ಬಯಲು: 33 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ – ಮತ್ತೋರ್ವ ಪರಾರಿ

Aug 4, 2026 - 09:42
 0  279
ಅಕ್ರಮ ಶ್ರೀಗಂಧ ಕೆತ್ತನೆ ಬಯಲು: 33 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ – ಮತ್ತೋರ್ವ ಪರಾರಿ

ಆಪ್ತ ನ್ಯೂಸ್ ಶಿರಸಿ:

ಅಕ್ರಮವಾಗಿ ಶ್ರೀಗಂಧ ಮರಗಳನ್ನು ಕಡಿದು ತುಂಡುಗಳನ್ನಾಗಿ ಕೆತ್ತನೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಇಲಾಖೆ, ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಸುಮಾರು 33.390 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.

ಶಿರಸಿ ತಾಲೂಕಿನ ಕಾನಗೋಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಜಾತಿಯ ತುಂಡುಗಳನ್ನು ಕೆತ್ತನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ವೇಳೆ ಆರೋಪಿಗಳಿಬ್ಬರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕಾನಗೋಡ ಗ್ರಾಮದ ಜನತಾ ಕಾಲೋನಿಯ ನಿವಾಸಿ ದಯಾನಂದ ನಾರಾಯಣ ನಾಯ್ಕನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, ಮಶಿಗದ್ದೆ ಹೊಳೆಕೈ ನಿವಾಸಿ ಮಂಜುನಾಥ ಅಣ್ಣಪ್ಪ ದೇವಾಡಿಗ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ವಿಶೇಷ ಶೋಧ ಕಾರ್ಯ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬಂಧಿತ ಆರೋಪಿಯಿಂದ ಒಟ್ಟು 33.390 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಶ್ರೀಗಂಧದ ಮೌಲ್ಯದ ಕುರಿತು ಅರಣ್ಯ ಇಲಾಖೆ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಜಿಲ್ಲೆಯಲ್ಲಿ ಶ್ರೀಗಂಧ ಕಳ್ಳಸಾಗಣೆ ಹಾಗೂ ಅಕ್ರಮ ಕೆತ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ಸಂದೀಪ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅಮಿತಕುಮಾರ ಚವ್ಹಾಣ ಅವರ ಮೇಲ್ವಿಚಾರಣೆಯಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ, ಅರಣ್ಯ ವನಪಾಲಕರಾದ ರೋಹಿತ್ ಎಂ. ನಾಯ್ಕ ಹಾಗೂ ಮಂಜುನಾಥ ಜಹಗೀರದಾರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0