ಚಾತುರ್ಮಾಸ್ಯದಲ್ಲೇ ಪರಿಸರ ಹೋರಾಟಕ್ಕೆ ಹೊಸ ರೂಪ! ನದಿ ತಿರುವು ಯೋಜನೆ ವಿರೋಧಿಸಿ 10 ಸಾವಿರ ಪತ್ರ ಚಳುವಳಿ ಆರಂಭ
ಆಪ್ತ ನ್ಯೂಸ್ ಶಿರಸಿ:
ಚಾತುರ್ಮಾಸ್ಯ ಎಂದರೆ ಕೇವಲ ವ್ರತ, ಜಪ-ತಪ ಮತ್ತು ಧಾರ್ಮಿಕ ಆಚರಣೆಗಳ ಅವಧಿ ಮಾತ್ರವಲ್ಲ; ಪ್ರಕೃತಿ ಸಂರಕ್ಷಣೆಯ ಸಂಕಲ್ಪವನ್ನು ಜನಮನದಲ್ಲಿ ಬಿತ್ತುವ ಪವಿತ್ರ ಕಾಲವೂ ಹೌದು ಎಂಬ ಸಂದೇಶದೊಂದಿಗೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಬೃಹತ್ 'ಪತ್ರ ಚಳುವಳಿ'ಗೆ ಚಾಲನೆ ನೀಡಿದೆ.
ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ವಿರೋಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ 10 ಸಾವಿರಕ್ಕೂ ಅಧಿಕ ಮನವಿ ಪತ್ರಗಳನ್ನು ಅಂಚೆ ಮೂಲಕ ರವಾನಿಸುವ ಗುರಿ ಹೊಂದಲಾಗಿದೆ. ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ನಡೆಯುವ ಚಾತುರ್ಮಾಸ್ಯದ ಅವಧಿಯಲ್ಲಿ ಮಠಕ್ಕೆ ಆಗಮಿಸುವ ಸಾವಿರಾರು ಶಿಷ್ಯರು ಹಾಗೂ ಭಕ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ಹಸಿರು ಸ್ವಾಮೀಜಿ ಎಂದೇ ಖ್ಯಾತರಾಗಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಂಕಲ್ಪದಂತೆ, "ಪ್ರಕೃತಿಯ ರಕ್ಷಣೆಯೇ ಪರಮ ಧರ್ಮ" ಎಂಬ ಸಂದೇಶವನ್ನು ಸಮಾಜದೊಳಗೆ ಬಿತ್ತುವ ಉದ್ದೇಶದಿಂದ ಈ ಜನಾಂದೋಲನ ರೂಪುಗೊಂಡಿದೆ. ಧರ್ಮಸಾಧನೆಯೊಂದಿಗೆ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂಬ ಆಶಯವನ್ನು ಮಠ ವ್ಯಕ್ತಪಡಿಸಿದೆ.
ಪರಿಸರಕ್ಕೆ ಶಾಶ್ವತ ಹಾನಿಯ ಆತಂಕ
ಮಠ ಸಿದ್ಧಪಡಿಸಿರುವ ಮನವಿ ಪತ್ರದಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳು ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆ, ದಟ್ಟ ಅರಣ್ಯ, ಜೀವವೈವಿಧ್ಯ ಹಾಗೂ ಕೃಷಿಭೂಮಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.
ನದಿಗಳ ಸಹಜ ಹರಿವು ಕುಂಠಿತಗೊಂಡರೆ ಕೆಳಭಾಗದ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಕೊರತೆ ಎದುರಾಗಬಹುದು. ಮೀನು ಸೇರಿದಂತೆ ಜಲಚರಗಳ ಸಂತಾನೋತ್ಪತ್ತಿಗೆ ಧಕ್ಕೆಯಾಗುವುದರ ಜೊತೆಗೆ ರೈತರು, ಮೀನುಗಾರರು ಹಾಗೂ ಅರಣ್ಯವನ್ನೇ ಅವಲಂಬಿಸಿರುವ ಸಮುದಾಯಗಳ ಜೀವನೋಪಾಯದ ಮೇಲೂ ದುಷ್ಪರಿಣಾಮ ಉಂಟಾಗುವ ಆತಂಕ ವ್ಯಕ್ತಪಡಿಸಲಾಗಿದೆ.
ಇದರ ಬದಲಾಗಿ ಮಳೆನೀರು ಸಂಗ್ರಹಣೆ, ಕೆರೆಗಳ ಪುನರುಜ್ಜೀವನ ಮತ್ತು ಸ್ಥಳೀಯ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
25 ಸಾವಿರ ಪತ್ರಗಳ ಬಳಿಕ ಮತ್ತೊಂದು ಹಂತ
ಕಳೆದ ತಿಂಗಳು ಶಿರಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ 25 ಸಾವಿರಕ್ಕೂ ಅಧಿಕ ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಪರಿಸರ ಕಾರ್ಯಕರ್ತ ವಿಶ್ವನಾಥ ಶೀಗೇಹಳ್ಳಿ ಅವರು ಶ್ರೀಗಳ ಮಾರ್ಗದರ್ಶನದಲ್ಲಿ ಅದರ ಸಂಚಾಲಕತ್ವ ವಹಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ 10 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಕಳುಹಿಸುವ ಗುರಿ ಹೊಂದಲಾಗಿದೆ.
ಈ ಅಭಿಯಾನದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಭಕ್ತರು ಭಾಗವಹಿಸಲಿದ್ದು, ಪರಿಸರ ಸಂರಕ್ಷಣೆಯ ಸಂದೇಶವನ್ನು ಮನೆಮನೆಗೂ ತಲುಪಿಸುವ ಪ್ರಯತ್ನ ನಡೆಯಲಿದೆ.
'ಇದು ಕೇವಲ ಪತ್ರ ಚಳುವಳಿಯಲ್ಲ'
ಬೇಡ್ತಿ–ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, "ಇದು ಕೇವಲ ಪತ್ರ ಬರೆಯುವ ಕಾರ್ಯಕ್ರಮವಲ್ಲ. ಪ್ರಕೃತಿಯ ಪರವಾಗಿ ಜನರ ಧ್ವನಿಯನ್ನು ಸರ್ಕಾರದ ಕಿವಿಗೆ ತಲುಪಿಸುವ ನಿರಂತರ ಜನಾಂದೋಲನ. ನದಿ, ಅರಣ್ಯ ಹಾಗೂ ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ" ಎಂದು ಹೇಳಿದರು.
'ಪ್ರತಿಯೊಬ್ಬರೂ ಭಾಗವಹಿಸಿ'
ಸೋಂದಾ ಸ್ವರ್ಣವಲ್ಲೀ ಶ್ರೀಗಳು, "ನದಿ ತಿರುವು ಯೋಜನೆ ಕುರಿತು ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ವಿರೋಧವನ್ನು ಸರ್ಕಾರಕ್ಕೆ ನಿರಂತರವಾಗಿ ತಿಳಿಸುವ ಪ್ರಯತ್ನ ಇದಾಗಿದೆ. ಮಠ ಸಿದ್ಧಪಡಿಸಿರುವ ಮಾದರಿ ಪತ್ರವನ್ನಾಗಲಿ ಅಥವಾ ತಮ್ಮದೇ ಮಾತುಗಳಲ್ಲಿ ಮನವಿಯನ್ನಾಗಲಿ ಬರೆದು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು" ಎಂದು ಕರೆ ನೀಡಿದ್ದಾರೆ.
ಧರ್ಮ, ಪರಿಸರ ಮತ್ತು ಜನಜಾಗೃತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ಈ ಪತ್ರ ಚಳುವಳಿ, ಪಶ್ಚಿಮ ಘಟ್ಟ ಹಾಗೂ ನದಿಗಳ ಉಳಿವಿಗಾಗಿ ನಡೆಯುತ್ತಿರುವ ಮಹತ್ವದ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



