ಬೇಡ್ತಿ–ಅಘನಾಶಿನಿ ಯೋಜನೆ ವಿರೋಧಿಸಿ ನ.3ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ
10 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆಗೆ ನಿರ್ಧಾರ | ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಾಧರಣಿ
ಆಪ್ತ ನ್ಯೂಸ್ ಯಲ್ಲಾಪುರ:
ಬೇಡ್ತಿ–ವರದಾ ನದಿತಿರುವು, ಗಂಗಾವಳಿ–ಅಘನಾಶಿನಿ ನದಿ ಯೋಜನೆಗಳನ್ನು ವಿರೋಧಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಿರ್ಧರಿಸಿದೆ. ಇದರ ಭಾಗವಾಗಿ ನವೆಂಬರ್ 3ರಂದು ಯಲ್ಲಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಗುರುವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
‘ಸಾತ್ವಿಕ ಹೋರಾಟ ಸಾಕಾಗಿದೆ; ಈಗ ಬೀದಿಗಿಳಿಯಬೇಕು’
ಈವರೆಗೆ ಯೋಜನೆಗಳ ವಿರುದ್ಧ ಪತ್ರ ಚಳವಳಿ, ಮನವಿ ಸಲ್ಲಿಕೆ, ಪ್ರತಿಭಟನಾ ಸಮಾವೇಶ ಸೇರಿದಂತೆ ಹಲವು ರೀತಿಯ ಸಾತ್ವಿಕ ಹೋರಾಟಗಳನ್ನು ನಡೆಸಲಾಗಿದೆ. ಶಿರಸಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವೂ ನಡೆದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳ ಗಮನಕ್ಕೂ ಯೋಜನೆ ವಿರೋಧಿ ಹೋರಾಟವನ್ನು ತರಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಹಲವು ಹಂತಗಳಲ್ಲಿ ಸಭೆಗಳನ್ನೂ ನಡೆಸಲಾಗಿದೆ.
ಆದರೂ ಸರ್ಕಾರದ ಮಟ್ಟದಲ್ಲಿ ಯೋಜನೆಯನ್ನು ಕೈಬಿಡುವ ಸ್ಪಷ್ಟ ಕ್ರಮ ಕಂಡುಬರದ ಹಿನ್ನೆಲೆಯಲ್ಲಿ, ಹೋರಾಟವನ್ನು ಇನ್ನಷ್ಟು ವ್ಯಾಪಕಗೊಳಿಸಬೇಕಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
‘ಇಲ್ಲಿಯವರೆಗೆ ನಡೆಸಿದ ಹೋರಾಟಗಳ ಹೊರತಾಗಿಯೂ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಚಟುವಟಿಕೆಗಳು ಮುಂದುವರಿದಿವೆ. ಹೀಗಾಗಿ ಇಡೀ ಜಿಲ್ಲೆಯ ಜನರು ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ತಡೆ ಮೂಲಕ ಸರ್ಕಾರದ ಗಮನ ಸೆಳೆಯಬೇಕು’ ಎಂಬ ಒಕ್ಕೊರಲಿನ ನಿರ್ಧಾರ ಸಭೆಯಲ್ಲಿ ವ್ಯಕ್ತವಾಯಿತು.
ನ.3ರಂದು 10 ಸಾವಿರಕ್ಕೂ ಅಧಿಕ ಜನರ ನಿರೀಕ್ಷೆ
ನವೆಂಬರ್ 3ರಂದು ಬೆಳಗ್ಗೆ 10 ಗಂಟೆಯಿಂದ ಯಲ್ಲಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಮಾಜಗಳ ಮುಖಂಡರು ಮತ್ತು ಸಾರ್ವಜನಿಕರು ಸೇರಿದಂತೆ 10 ಸಾವಿರಕ್ಕೂ ಅಧಿಕ ಜನರನ್ನು ಪ್ರತಿಭಟನೆಯಲ್ಲಿ ಸೇರಿಸುವ ಗುರಿಯನ್ನು ಸಮಿತಿ ಹೊಂದಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿಭಟನಾಕಾರರು ಮೊದಲು ಜಮಾಯಿಸಿ, ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಠಿಕಾಣಿ ಹೂಡಿ ಪ್ರತಿಭಟನೆ ನಡೆಸುವ ರೂಪುರೇಷೆಯನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಯುವಕರು, ಮಹಿಳೆಯರು, ವಿದ್ಯಾರ್ಥಿಗಳಿಗೂ ಕರೆ
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಹೋರಾಟ ಮತ್ತು ವಿರೋಧದ ನಡುವೆಯೂ ಯೋಜನೆ ಮುಂದುವರಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಪ್ರತಿಭಟನೆ ಇನ್ನಷ್ಟು ವ್ಯಾಪಕವಾಗಬೇಕು. ಎಲ್ಲ ವರ್ಗದ ಜನರು ಹೋರಾಟದಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಬೇಕು. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ದೀಪಕ ದೊಡ್ಡೂರು ಮಾತನಾಡಿ, ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ಜನಬೆಂಬಲ ದೊರೆಯುತ್ತಿದೆ. ಮಾಜಿ ಸಂಸದ ಅನಂತಕುಮಾರ ಹೆಗಡೆಯವರನ್ನೂ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸಬೇಕು. ಅವರ ಸೈದ್ಧಾಂತಿಕ ಬೆಂಬಲ ಹೋರಾಟಕ್ಕೆ ಬಲ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ರಾಘವ ಭಟ್ಟ ಹಾಸಣಗಿ ಅವರು ಜಿಲ್ಲೆಯ ವಿವಿಧ ಭಾಗಗಳಿಂದ ಜನರನ್ನು ಪ್ರತಿಭಟನೆಗೆ ಕರೆತರುವ ಕಾರ್ಯತಂತ್ರದ ಕುರಿತು ವಿವರಿಸಿದರು. ಹಿರಿಯ ಸಹಕಾರಿ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಈ ಹಂತದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದೇ ಪರಿಹಾರದ ಮಾರ್ಗವಾಗಿದ್ದು, ಯಾವುದಕ್ಕೂ ಹಿಂಜರಿಯಬಾರದು ಎಂದರು.
ಸ್ಥಳೀಯ ಮಟ್ಟದಲ್ಲಿ ಸಮಿತಿ ರಚನೆಗೆ ನಿರ್ಧಾರ
ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ತಡೆ ಮೂಲಕ ಪರಿಣಾಮಕಾರಿ ಹೋರಾಟ ನಡೆಯಬೇಕು. ಯುವಕರು, ಮಹಿಳೆಯರು ಹಾಗೂ ಎಲ್ಲ ಸಮುದಾಯಗಳ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಂಘಟನಾ ಕಾರ್ಯ ನಡೆಸಬೇಕು ಎಂದರು.
ಈ ನಿಟ್ಟಿನಲ್ಲಿ ಪ್ರತಿಭಟನೆಗೆ ಸಿದ್ಧತೆ ಕೈಗೊಳ್ಳಲು ಸ್ಥಳೀಯವಾಗಿ ಸಮಿತಿಗಳನ್ನು ರಚಿಸಿ, ಅವುಗಳನ್ನು ಕ್ರಿಯಾಶೀಲಗೊಳಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುವ ಕುರಿತು ಪಕ್ಷಾತೀತವಾಗಿ ಗಂಭೀರ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು.
ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ
ಯೋಜನೆ ವಿರೋಧಿ ಹೋರಾಟವನ್ನು ಬೆಂಗಳೂರಿಗೂ ವಿಸ್ತರಿಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೇಡ್ತಿ–ಅಘನಾಶಿನಿ–ಗಂಗಾವಳಿ ಯೋಜನೆಗಳ ವಿರುದ್ಧ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.
ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಿ ಧರಣಿಯಲ್ಲಿ ಭಾಗವಹಿಸಬೇಕು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಕೊಳ್ಳ ಸಮಿತಿಯ ಪ್ರಮುಖರಾದ ವಿಶ್ವನಾಥ ಹೆಗಡೆ ಶೀಗೆಹಳ್ಳಿ, ರಮೇಶ ದುಬಾಶಿ, ಸೀಮಾಧ್ಯಕ್ಷ ನಾಗೇಶ ಪಣತಗೇರಿ, ಪ್ರಮೋದ ವೈದ್ಯ ಮತ್ತಿಘಟ್ಟಾ, ವೆಂಕಟ್ರಮಣ ಭಟ್ಟ ಕಿಕುಂಭತ್ತಿ, ವೆಂಕಟ್ರಮಣ ಬೆಳ್ಳಿ, ವಿಶ್ವನಾಥ ಹಳೆಮನೆ, ಡಾ. ರವಿ ಭಟ್ಟ, ಚನ್ನಪ್ಪ ಗೌಡ, ಉಮೇಶ ಭಾಗ್ವತ, ಕಳಚೆ, ಆರ್.ವಿ. ಹೆಗಡೆ, ರಘುಪತಿ ಕಂಪ್ಲಿ, ಉಮೇಶ ಭಾಗ್ವತ್ ಕಂಚನಳ್ಳಿ, ಭಾಸ್ಕರ ಸಿದ್ದಿ, ಸಂತೋಷ ಭಟ್ಟ ಹಲವಳ್ಳಿ, ಸುಬ್ಬಣ್ಣ ಬೊಳ್ಮನೆ, ಎಸ್.ವಿ.ಟಿ. ಹೆಗಡೆ, ವಿ.ಟಿ. ತೊಂಡೆಕೆರೆ, ನಾಗರಾಜ ಕವಡಿಕೆರೆ, ಎಂ.ಕೆ. ಭಟ್ಟ ಯಡಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಬೇಡ್ತಿ–ಅಘನಾಶಿನಿ ನದಿ ಕಣಿವೆಯ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಇದೀಗ ಹೆದ್ದಾರಿ ತಡೆ ಹಾಗೂ ಬೆಂಗಳೂರಿನ ಬೃಹತ್ ಧರಣ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0