ನದಿ ತಿರುವು ಯೋಜನೆ ವಿರುದ್ಧ ಕಾರವಾರದಲ್ಲಿ ಬೃಹತ್ ಪ್ರತಿಭಟನೆ

‘ಸರ್ವೆಗೂ ಅವಕಾಶ ನೀಡಬೇಡಿ’; ಯೋಜನೆ ಮುಂದುವರಿಸಿದರೆ ಉಗ್ರ ಹೋರಾಟದ ಎಚ್ಚರಿಕೆ

Sep 3, 2026 - 15:45
 0  96
ನದಿ ತಿರುವು ಯೋಜನೆ ವಿರುದ್ಧ ಕಾರವಾರದಲ್ಲಿ ಬೃಹತ್ ಪ್ರತಿಭಟನೆ

ಆಪ್ತ ನ್ಯೂಸ್ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ, ನದಿಕಣಿವೆ ಹಾಗೂ ಕರಾವಳಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರೋಪಿಸಿ ಪ್ರಸ್ತಾಪಿತ ಬೇಡ್ತಿ–ಹಿರೇವಡ್ಡಟ್ಟಿ (ಬೇಡ್ತಿ–ವರದಾ) ಹಾಗೂ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಕಾರವಾರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಗಂಗಾವಳಿ–ಕರಾವಳಿ ಉಳಿಸಿ ಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರೈತರು, ಪರಿಸರ ಹೋರಾಟಗಾರರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿ ಯೋಜನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ‘ನದಿ ಉಳಿಸಿ, ಪಶ್ಚಿಮಘಟ್ಟ ಉಳಿಸಿ’ ಎಂಬ ಘೋಷಣೆಗಳೊಂದಿಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉದ್ದೇಶಿಸಿ ಸಿದ್ಧಪಡಿಸಿದ್ದ ಮನವಿಯನ್ನು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರಿಗೆ ಸಲ್ಲಿಸಲಾಯಿತು.

‘ಬೃಹತ್ ಕಾಮಗಾರಿಗಳಿಂದ ಪಶ್ಚಿಮಘಟ್ಟಕ್ಕೆ ಅಪಾಯ’

ನದಿ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಅಣೆಕಟ್ಟು, ಕಾಲುವೆ, ಸುರಂಗ, ಪೈಪ್‌ಲೈನ್‌, ಪಂಪ್‌ಹೌಸ್‌, ವಿದ್ಯುತ್ ಪ್ರಸರಣ ಮಾರ್ಗ ಹಾಗೂ ಸೇವಾ ರಸ್ತೆಗಳಂತಹ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ಪಶ್ಚಿಮಘಟ್ಟದ ಗುಡ್ಡ ಪ್ರದೇಶಗಳಲ್ಲಿ ವ್ಯಾಪಕ ಭೂ ಅಗೆತ ಹಾಗೂ ಅರಣ್ಯ ನಾಶ ಸಂಭವಿಸುವ ಆತಂಕವಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಬೇಡ್ತಿ ನದಿ ಕಣಿವೆಯಲ್ಲಿ ಹೆಚ್ಚಿನ ಮಳೆ ಕೆಲವೇ ಮಳೆಗಾಲದ ತಿಂಗಳಲ್ಲಿ ಸುರಿಯುತ್ತಿದ್ದು, ಉಳಿದ ಅವಧಿಯಲ್ಲಿ ನದಿಯ ಹರಿವು ಗಣನೀಯವಾಗಿ ಕುಸಿಯುತ್ತದೆ. ಹೀಗಾಗಿ ನದಿಯಲ್ಲಿ ‘ಹೆಚ್ಚುವರಿ ನೀರು’ ಲಭ್ಯವಿದೆ ಎಂಬ ಪರಿಕಲ್ಪನೆಯೇ ವಾಸ್ತವಿಕವಲ್ಲ ಎಂದು ನೀರಾವರಿ ಹಾಗೂ ಜಲ ತಜ್ಞರ ಅಧ್ಯಯನಗಳನ್ನು ಉಲ್ಲೇಖಿಸಿ ಸಮಿತಿ ವಾದಿಸಿದೆ.

ನದಿಯ ಕನಿಷ್ಠ ಪರಿಸರ ಹರಿವು ಮತ್ತಷ್ಟು ಕಡಿಮೆಯಾದರೆ ಸ್ಥಳೀಯ ಜನರಿಗೆ ನೀರಿನ ಸಮಸ್ಯೆ ಉಂಟಾಗುವುದರ ಜೊತೆಗೆ ನದಿಯ ಪರಿಸರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಲಾಗಿದೆ.

ಜೀವವೈವಿಧ್ಯ, ವನ್ಯಜೀವಿ ಮತ್ತು ಕರಾವಳಿಗೂ ಆತಂಕ

ನದಿ ತಿರುವು ಯೋಜನೆಗಳಿಗಾಗಿ ನಡೆಯುವ ಕಾಮಗಾರಿಗಳಿಂದ ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದ್ದು, ವನ್ಯಜೀವಿಗಳ ಆವಾಸಸ್ಥಾನ ವಿಭಜನೆಯಾಗಬಹುದು. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುವುದರ ಜೊತೆಗೆ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತದ ಅಪಾಯವೂ ಹೆಚ್ಚಬಹುದು ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಬೇಡ್ತಿ ಹಾಗೂ ಅಘನಾಶಿನಿ ನದಿಗಳ ಮೇಲೆ ಅವಲಂಬಿತವಾಗಿರುವ ರೈತರು, ಸಣ್ಣ ಕೃಷಿಕರು, ಪಶುಪಾಲಕರು, ಅರಣ್ಯಾಧಾರಿತ ಸಮುದಾಯಗಳು ಹಾಗೂ ಕರಾವಳಿ ಭಾಗದ ಮೀನುಗಾರರ ಜೀವನೋಪಾಯಕ್ಕೂ ಯೋಜನೆಗಳು ಹೊಡೆತ ನೀಡುವ ಸಾಧ್ಯತೆಯಿದೆ ಎಂದು ಸಮಿತಿ ತಿಳಿಸಿದೆ.

ನದಿಗಳ ಸಿಹಿನೀರಿನ ಹರಿವು ಕಡಿಮೆಯಾದರೆ ನದಿಮುಖ ಪ್ರದೇಶಗಳಿಗೆ ಸಮುದ್ರದ ಉಪ್ಪುನೀರು ಒಳನುಗ್ಗುವ ಸಾಧ್ಯತೆಯಿದ್ದು, ಇದರಿಂದ ಕುಡಿಯುವ ನೀರು, ಕೃಷಿ ಹಾಗೂ ಮೀನುಗಾರಿಕೆ ಮೇಲೂ ಪರಿಣಾಮ ಬೀರಬಹುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

‘ಸರ್ವೆ ನಡೆಸಿದರೆ ಉಗ್ರ ಹೋರಾಟ’

ನದಿ ತಿರುವು ಯೋಜನೆಗಳ ವಿರುದ್ಧ ಕಳೆದ 25 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಕಳೆದ ಒಂದು ವರ್ಷದಿಂದ ಹೋರಾಟ ಮತ್ತಷ್ಟು ವ್ಯಾಪಕವಾಗಿದೆ ಎಂದು ಪರಿಸರ ಹೋರಾಟಗಾರ ಅನಂತ್ ಅಶಿಸರ ತಿಳಿಸಿದರು.

ಜನವರಿಯಲ್ಲಿ ಶಿರಸಿಯಲ್ಲಿ ನಡೆದ ‘ಪಶ್ಚಿಮಘಟ್ಟ ಉಳಿಸಿ’ ಸಮಾವೇಶದಲ್ಲಿ ಸುಮಾರು 25 ಸಾವಿರ ಜನರು ಭಾಗವಹಿಸಿದ್ದರು. ಜೂನ್‌ನಲ್ಲಿ ಸುಮಾರು 20 ಸಾವಿರ ಸಹಿಗಳ ಮನವಿ ಸಲ್ಲಿಸಲಾಗಿದ್ದು, ಆಗಸ್ಟ್‌ನಿಂದ ಸುಮಾರು ಒಂದು ಲಕ್ಷ ಜನರ ಸಹಿ ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಗ್ರಾಮ ಪಂಚಾಯತ್‌ಗಳು, ವಿವಿಧ ಸಹಕಾರಿ ಸಂಸ್ಥೆಗಳು ಹಾಗೂ ಜಿಲ್ಲಾ ಮಟ್ಟದ ಸಭೆಗಳಲ್ಲಿ ಯೋಜನೆಗಳನ್ನು ವಿರೋಧಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕುಮಟಾ, ಅಂಕೋಲಾ ಸೇರಿದಂತೆ ಕರಾವಳಿ ಭಾಗದಲ್ಲೂ ಜನಜಾಗೃತಿ ಮೂಡಿಸಲಾಗಿದೆ. ಪಾದಯಾತ್ರೆ, ವಿಚಾರ ಸಂಕಿರಣ, ನದಿ ಅಭಿಯಾನ, ಭಜನಾ ಸತ್ಯಾಗ್ರಹ, ನದಿ ಪೂಜೆ, ಬೀದಿನಾಟಕ ಹಾಗೂ ವೃಕ್ಷಾರೋಪಣೆಯ ಮೂಲಕ ಹೋರಾಟವನ್ನು ವಿಸ್ತರಿಸಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

ಬೇಡ್ತಿ–ಹಿರೇವಡ್ಡಟ್ಟಿ ಹಾಗೂ ಅಘನಾಶಿನಿ–ವೇದಾವತಿ ನದಿ ಸಂಪರ್ಕ ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕು. ಬೇಡ್ತಿ–ಹಿರೇವಡ್ಡಟ್ಟಿ ಯೋಜನೆಯ DPR ತಯಾರಿಸಲು ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಹಾಗೂ ಸಂಬಂಧಿಸಿದ ಎಲ್ಲ ಸಮೀಕ್ಷಾ ಕಾರ್ಯಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಯೋಜನೆ ಜಾರಿಗೆ ಯಾವುದೇ ಕಾರಣಕ್ಕೂ ಸರ್ವೆ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬಾರದು. ಸರ್ವೆ ಕಾರ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0