30 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಕ ಸುನೀಲ್ ಹೊನ್ನಾವರ ದಂಪತಿಗೆ ಬೆಂಗಳೂರಿನಲ್ಲಿ ಸನ್ಮಾನ
ಆಪ್ತ ನ್ಯೂಸ್ ಬೆಂಗಳೂರು:
ದೂರವಾಣಿ ಕರೆ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಹಾವು ಸೇರಿದಂತೆ ವಿಷಜಂತುಗಳ ರಕ್ಷಣೆ ಮಾಡುವ ಮೂಲಕ ಜನರು, ಜಾನುವಾರುಗಳು ಹಾಗೂ ಇತರ ಪ್ರಾಣಿ–ಪಕ್ಷಿಗಳ ಜೀವ ಉಳಿಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಖ್ಯಾತ ಉರಗ ರಕ್ಷಕ ಹಾಗೂ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಹಾಗೂ ಅವರ ಧರ್ಮಪತ್ನಿ ಆಶಾ ಹೊನ್ನಾವರ ಅವರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬೆಂಗಳೂರು ಗೋಳಹಳ್ಳಿ, ಎಲೆಕ್ಟ್ರಾನಿಕ್ ಸಿಟಿಯ ಕೆನರಾ ಗುರುಕುಲ ಸಭಾಭವನದಲ್ಲಿ ಭಾನುವಾರ ಉತ್ತರ ಕನ್ನಡ ಕ್ಷತ್ರಿಯ ಶೇರುಗಾರ ಸಮಾಜ ಬೆಂಗಳೂರು ಆಶ್ರಯದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ, ಸಮಾಜದ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾಸಭೆಯಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಸುನೀಲ್ ಹೊನ್ನಾವರ ದಂಪತಿಯನ್ನು ಗೌರವಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಬೆಂಗಳೂರಿನ ಕ್ಷತ್ರಿಯ (ಶೇರುಗಾರ) ಸಮಾಜದ ಅಧ್ಯಕ್ಷ ವಿನಾಯಕ ಆರ್. ನಾಯ್ಕ, “ಸುನೀಲ್ ಹೊನ್ನಾವರ ಅವರು ಇದುವರೆಗೆ 30 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ, ಜನಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ನಮ್ಮ ಕ್ಷತ್ರಿಯ (ಶೇರುಗಾರ) ಸಮುದಾಯದವರೊಬ್ಬರು ಇಂತಹ ಅಪರೂಪದ ಸೇವಾ ಕಾರ್ಯದಲ್ಲಿ ತೊಡಗಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಹಾವುಗಳನ್ನು ರಕ್ಷಿಸುವ ಕಾರ್ಯ ಮುಂದುವರಿಸಬೇಕು. ಜತೆಗೆ ಹಾವುಗಳನ್ನು ಸುರಕ್ಷಿತವಾಗಿ ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಹೆಚ್ಚಿನ ಜನರಿಗೆ ತರಬೇತಿ ನೀಡುವ ಮೂಲಕ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಬೇಕು” ಎಂದು ಆಶಿಸಿದರು.
ಸುನೀಲ್ ಹೊನ್ನಾವರ ಅವರ ಉರಗ ರಕ್ಷಣಾ ಕಾರ್ಯವು ಕೇವಲ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವುದಕ್ಕೆ ಸೀಮಿತವಾಗಿಲ್ಲ. ಹಾವುಗಳ ಬಗ್ಗೆ ಜನರಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವುದರ ಜತೆಗೆ, ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅಪಾಯಕಾರಿ ಪರಿಸ್ಥಿತಿಗಳಲ್ಲಿಯೂ ಸ್ಥಳಕ್ಕೆ ತೆರಳಿ ಹಾವುಗಳನ್ನು ರಕ್ಷಿಸುವ ಅವರ ಸೇವೆಗೆ ಸಮಾಜದ ವತಿಯಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಗೋವಿಂದರಾಯ್ ಹಾಗೂ ಯಕ್ಷಗಾನ ಕಲಾವಿದರಾದ ಗಣೇಶ್ ನಾಯ್ಕ್ ಮತ್ತು ಸಂತೋಷ ನಾಯ್ಕ್ ಅವರನ್ನೂ ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ವಿನಾಯಕ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕ್ ಆರ್. ನಾಯ್ಕ್, ಸುರೇಶ ನಾಯ್ಕ್, ಗೋವಿಂದರಾಯ್ ಸಂಕೊಳ್ಳಿ, ಸುನಿಲ್ ನಾಯ್ಕ್, ಜ್ಞಾನೇಶ್ ನಾಯ್ಕ್, ರಾಜೇಶ್ ನಾಯ್ಕ್, ಹೇಮಾಮಾಲಿನಿ ಪರಾಶರ ಹಾಗೂ ಸಂಧ್ಯಾ ನಾಯ್ಕ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸಮಾಜದ ಶೈಕ್ಷಣಿಕ ಸಾಧಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ 90ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದರೊಂದಿಗೆ ಸಮಾಜದ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಂದೇಶ ಸಾರಲಾಯಿತು.
25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಂಗೋಲಿ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರಿಂದ ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಪ್ರೇಮಾ ನಾಯ್ಕ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸುರೇಶ ನಾಯ್ಕ್ ಲೆಕ್ಕಪತ್ರ ಮಂಡಿಸಿದರೆ, ಜ್ಞಾನೇಶ್ ನಾಯ್ಕ್ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಪರಾಶರ ಸ್ವಾಗತಿಸಿದರು. ಗಣೇಶ್ ನಾಯ್ಕ್ ಅತಿಥಿಗಳನ್ನು ಪರಿಚಯಿಸಿದರು. ರಾಜೇಶ್ ನಾಯ್ಕ್ ವಂದಿಸಿದರು.
ಸಮಾಜದ 25 ವರ್ಷಗಳ ಪಯಣವನ್ನು ಸ್ಮರಿಸುವುದರ ಜತೆಗೆ, ಸಾಧಕರನ್ನು ಗೌರವಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಕಲೆ–ಸಂಸ್ಕೃತಿಗೆ ವೇದಿಕೆ ಕಲ್ಪಿಸಿದ ಈ ವಾರ್ಷಿಕೋತ್ಸವವು ಸಮಾಜದ ಒಗ್ಗಟ್ಟು ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



