ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು; ಪ್ರಾಣದ ಹಂಗು ತೊರೆದು ಶವ ಹೊರತೆಗೆದ PSI ಖಾದರ್

Aug 23, 2026 - 16:04
 0  243
ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು; ಪ್ರಾಣದ ಹಂಗು ತೊರೆದು ಶವ ಹೊರತೆಗೆದ PSI ಖಾದರ್
ಎಐ ಮೂಲಕ ಚಿತ್ರಿತ ಸಾಂದರ್ಭಿಕ ಚಿತ್ರ

ಆಪ್ತ ನ್ಯೂಸ್ ಕುಮಟಾ:

ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಘಟನೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ನಡೆದಿದೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿಯನ್ನು ಹೆಗಡೆ ಗ್ರಾಮದ ಗುನಗನಕೊಪ್ಪ ನಿವಾಸಿ ಪ್ರಶಾಂತ ಕೇಶವ ಮುಕ್ಕಿ (18) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಹೆಗಡೆ ಗ್ರಾಮದ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದರು. ಸ್ನೇಹಿತರೊಂದಿಗೆ ಈಜುತ್ತಿದ್ದ ವೇಳೆ ಪ್ರಶಾಂತ ಆಕಸ್ಮಿಕವಾಗಿ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ಕೆಲವೇ ಕ್ಷಣಗಳಲ್ಲಿ ಆತ ನೀರಿನ ಮೇಲ್ಮೈಗೆ ಬಾರದೆ ನಾಪತ್ತೆಯಾಗಿದ್ದು, ಘಟನೆಯಿಂದ ಸ್ನೇಹಿತರು ಆತಂಕಗೊಂಡಿದ್ದಾರೆ.

ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸಿದರು. ಕೆರೆಯ ಆಳ ಹಾಗೂ ನೀರಿನ ಸ್ಥಿತಿ ಸವಾಲಾಗಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪತ್ತೆ ಕಾರ್ಯ ತೀವ್ರಗೊಂಡಿತ್ತು.

ಪ್ರಾಣದ ಹಂಗು ತೊರೆದು ಕೆರೆಗೆ ಧುಮುಕಿದ PSI ಖಾದರ್

ಶೋಧ ಕಾರ್ಯದ ವೇಳೆ ಕುಮಟಾ ಠಾಣೆಯ ಪಿ.ಎಸ್.ಐ ಖಾದರ್ ಅವರು ವಿಶೇಷ ಧೈರ್ಯ ಮೆರೆದಿದ್ದಾರೆ. ವಿದ್ಯಾರ್ಥಿ ನೀರಿನಲ್ಲಿ ನಾಪತ್ತೆಯಾಗಿರುವುದು ತಿಳಿದ ತಕ್ಷಣ, ಪರಿಸ್ಥಿತಿಯ ಅಪಾಯವನ್ನು ಲೆಕ್ಕಿಸದೆ ತಮ್ಮ ಸಮವಸ್ತ್ರವನ್ನು ಕಳಚಿ ಕೆರೆಗೆ ಧುಮುಕಿದರು.

ನೀರಿನ ಆಳಕ್ಕೆ ತೆರಳಿ ಸುದೀರ್ಘವಾಗಿ ಶೋಧ ನಡೆಸಿದ ಅವರು, ಕೊನೆಗೂ ನೀರಿನಲ್ಲಿ ಮುಳುಗಿದ್ದ ಪ್ರಶಾಂತ್ ಅವರ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು. ಪಿ.ಎಸ್.ಐ ಖಾದರ್ ಅವರ ಈ ಸಾಹಸ ಹಾಗೂ ಕರ್ತವ್ಯನಿಷ್ಠೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಈ ಘಟನೆ ವಿದ್ಯಾರ್ಥಿಗಳು ಹಾಗೂ ಯುವಕರು ಕೆರೆ, ನದಿ, ಹಳ್ಳ ಸೇರಿದಂತೆ ಆಳವಾದ ನೀರಿನ ಪ್ರದೇಶಗಳಲ್ಲಿ ಈಜುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕೆಂಬ ಎಚ್ಚರಿಕೆಯನ್ನೂ ಮೂಡಿಸಿದೆ. ಮಳೆಗಾಲದಲ್ಲಿ ನೀರಿನ ಮಟ್ಟ ಹಾಗೂ ಹರಿವಿನ ಸ್ವರೂಪ ಬದಲಾಗುವ ಹಿನ್ನೆಲೆಯಲ್ಲಿ ಅಪಾಯದ ಅರಿವಿಲ್ಲದೆ ನೀರಿಗೆ ಇಳಿಯುವುದು ಜೀವಕ್ಕೆ ಮಾರಕವಾಗಬಹುದು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0