ಪೂಜೆಯ ನೆಪದಲ್ಲಿ ಅರ್ಚಕರ ಕೊಲೆ; ತೋಟದಲ್ಲಿ ಶವ ಹೂತಿಟ್ಟಿದ್ದರು!

ಆರು ವರ್ಷಗಳ ಬಳಿಕ ತೀರ್ಪು: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Sep 3, 2026 - 21:29
 0  262
ಪೂಜೆಯ ನೆಪದಲ್ಲಿ ಅರ್ಚಕರ ಕೊಲೆ; ತೋಟದಲ್ಲಿ ಶವ ಹೂತಿಟ್ಟಿದ್ದರು!

ಆಪ್ತ ನ್ಯೂಸ್ ಕಾರವಾರ:

ಪೂಜೆಯ ನೆಪದಲ್ಲಿ ದೇವಾಲಯದ ಅರ್ಚಕರನ್ನು ಕರೆದೊಯ್ದು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ತೋಟದಲ್ಲೇ ಹೂತಿಟ್ಟಿದ್ದ ಪ್ರಕರಣಕ್ಕೆ ಆರು ವರ್ಷಗಳ ಬಳಿಕ ನ್ಯಾಯ ದೊರೆತಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ, ಮೂವರು ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.

ಕುಮಟಾ ತಾಲೂಕಿನ ಮುರೂರಿನ ಕುಂಭೇಶ್ವರ ದೇವಾಲಯದ ಅರ್ಚಕ ವಿಶ್ವೇಶ್ವರ ಭಟ್ ಹತ್ಯೆ ಪ್ರಕರಣದಲ್ಲಿ ಕುಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೆ ಗುರಿಯಾಗಿದ್ದಾರೆ.

ಭೂಮಿಪೂಜೆ ನೆಪದಲ್ಲಿ ಕರೆದೊಯ್ದು ಹತ್ಯೆ

2018ರ ಅಕ್ಟೋಬರ್ 16ರಂದು ಭೂಮಿಪೂಜೆ ಮಾಡಿಕೊಡುವ ನೆಪದಲ್ಲಿ ವಿಶ್ವೇಶ್ವರ ಭಟ್ ಅವರನ್ನು ಆರೋಪಿಗಳು ಕರೆದೊಯ್ದಿದ್ದರು. ಬಳಿಕ ಕುಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು.

ಹತ್ಯೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತೋಟದಲ್ಲೇ ಗುಂಡಿ ತೆಗೆದು ಶವವನ್ನು ಹೂತಿಟ್ಟಿದ್ದರು. ಅಲ್ಲದೆ, ಮೃತರ ಬೈಕ್‌ನ್ನು ಸಮೀಪದ ಬಾವಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಪತ್ನಿಯ ದೂರಿನಿಂದ ಬಯಲಾದ ಭೀಕರ ಕೃತ್ಯ

ಪತಿ ಕಾಣೆಯಾಗಿರುವ ಕುರಿತು ಮೃತರ ಪತ್ನಿ ಸರಸ್ವತಿ ಭಟ್ ಕುಮಟಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

ತನಿಖೆಯ ವೇಳೆ ತೋಟದಲ್ಲಿ ಹೂತಿಟ್ಟಿದ್ದ ವಿಶ್ವೇಶ್ವರ ಭಟ್ ಅವರ ಶವವನ್ನು ಹೊರತೆಗೆದು, ಶವಪರೀಕ್ಷೆ ನಡೆಸಲಾಗಿತ್ತು.

62 ಸಾಕ್ಷಿಗಳು, 177 ದಾಖಲೆಗಳು

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು, ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ಮೂವರಿಗೂ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ 62 ಸಾಕ್ಷಿಗಳು, 177 ದಾಖಲೆಗಳು ಹಾಗೂ 15 ಮುದ್ದೆಮಾಲುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳು ಪ್ರಮುಖ ಸಾಕ್ಷ್ಯಗಳಾಗಿ ಪರಿಗಣಿಸಲ್ಪಟ್ಟಿವೆ.

ಆರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಅರ್ಚಕ ವಿಶ್ವೇಶ್ವರ ಭಟ್ ಹತ್ಯೆ ಪ್ರಕರಣಕ್ಕೆ ಅಂತಿಮ ತೆರೆ ಬಿದ್ದಿದ್ದು, ಕುಟುಂಬಕ್ಕೆ ನ್ಯಾಯ ದೊರೆತಂತಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0