ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಭೇಟಿ ಮಾಡಿದ ಸಂಸದ ಕಾಗೇರಿ – ಉತ್ತರ ಕನ್ನಡದ BSNL ಹಾಗೂ ಅಂಚೆ ಇಲಾಖೆ ಸಮಸ್ಯೆಗಳ ಶೀಘ್ರ ಪರಿಹಾರದ ಭರವಸೆ
ಆಪ್ತ ನ್ಯೂಸ್ ನವದೆಹಲಿ/ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿನ ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಸಮಸ್ಯೆ, ತಾಂತ್ರಿಕ ವ್ಯತ್ಯಯ, ಬ್ಯಾಟರಿ ಬ್ಯಾಕಪ್ ಕೊರತೆ ಹಾಗೂ ಅಂಚೆ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವದೆಹಲಿಯಲ್ಲಿ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಭೇಟಿಯ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿಎಸ್‌ಎನ್‌ಎಲ್ ಸೇವೆಯಲ್ಲಿ ಆಗಾಗ್ಗೆ ಉಂಟಾಗುತ್ತಿರುವ ವ್ಯತ್ಯಯದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಸರ್ಕಾರಿ ಸೇವೆಗಳನ್ನು ಅವಲಂಬಿಸಿರುವ ನಾಗರಿಕರು ಎದುರಿಸುತ್ತಿರುವ ಸಂಕಷ್ಟವನ್ನು ಸಂಸದರು ಸಚಿವರ ಗಮನಕ್ಕೆ ತಂದರು. ವಿಶೇಷವಾಗಿ ವಿದ್ಯುತ್ ವ್ಯತ್ಯಯದ ಸಂದರ್ಭಗಳಲ್ಲಿ ಬ್ಯಾಟರಿ ಬ್ಯಾಕಪ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳುತ್ತಿರುವ ವಿಚಾರವನ್ನು ವಿವರಿಸಿದರು.
ಇದಾದ ಬಳಿಕ ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೂರಸಂಪರ್ಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಜಿಲ್ಲೆಯ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಹೆಚ್ಚಿಸುವುದು, ಹಳೆಯ ಮೂಲಸೌಕರ್ಯವನ್ನು ಆಧುನೀಕರಿಸುವುದು, ಟವರ್‌ಗಳ ಬ್ಯಾಟರಿ ಬ್ಯಾಕಪ್ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಸಾರ್ವಜನಿಕರಿಗೆ ನಿರಂತರ ಸಂಪರ್ಕ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಅಂಚೆ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗಳ ಗುಣಮಟ್ಟ ಹೆಚ್ಚಿಸುವುದು, ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯವನ್ನು ಬಲಪಡಿಸುವುದು ಸೇರಿದಂತೆ ಸಾರ್ವಜನಿಕರ ಬೇಡಿಕೆಗಳನ್ನೂ ಸಚಿವರ ಮುಂದಿಟ್ಟರು.
ಈ ಎಲ್ಲಾ ಸಮಸ್ಯೆಗಳನ್ನು ಅತ್ಯಂತ ಸಕಾರಾತ್ಮಕವಾಗಿ ಆಲಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸಮಸ್ಯೆಗಳ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಜಿಲ್ಲೆಯ ಜನರು ಬಹುಕಾಲದಿಂದ ಎದುರಿಸುತ್ತಿರುವ ದೂರಸಂಪರ್ಕ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದ್ದು, ಕೇಂದ್ರ ಸರ್ಕಾರದಿಂದ ಶೀಘ್ರ ಕ್ರಮ ಜರುಗುವ ನಿರೀಕ್ಷೆ ವ್ಯಕ್ತವಾಗಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



