ಉಕ್ಕಿ ಹರಿದ ಪಟ್ಟದ ಹೊಳೆ: ಮಣದೂರು–ಕುದರಗೋಡ ಸಂಪರ್ಕ ಸಂಪೂರ್ಣ ಕಡಿತ, ಗ್ರಾಮಸ್ಥರಲ್ಲಿ ಆತಂಕ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಸಾಲ್ಕಣಿ ಸಮೀಪದ ಪಟ್ಟದ ಹೊಳೆ ಭಾರೀ ಮಳೆಯಿಂದ ಉಕ್ಕಿ ಹರಿದ ಪರಿಣಾಮ ಮಣದೂರು ಹಾಗೂ ಕುದರಗೋಡ ಗ್ರಾಮಗಳಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಳೆಯ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ಏರಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಕುದರಗೋಡ ಗ್ರಾಮದಲ್ಲಿ 17ಕ್ಕೂ ಹೆಚ್ಚು ಮನೆಗಳಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಗ್ರಾಮಸ್ಥರು ಅಗತ್ಯ ವಸ್ತುಗಳ ಸಾಗಣೆ, ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಅಲ್ಲಿನ ಜನಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಕಳೆದ ಐದು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ರಸ್ತೆ ಸಂಪರ್ಕವೂ ಕಡಿತಗೊಂಡಿರುವುದರಿಂದ ಗ್ರಾಮ ಸಂಪೂರ್ಣವಾಗಿ ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ತಾಲೂಕು ಆಡಳಿತ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಗತ್ಯವಿದ್ದರೆ ಪರ್ಯಾಯ ಸಂಪರ್ಕ ವ್ಯವಸ್ಥೆ, ವಿದ್ಯುತ್ ಪುನಃಸ್ಥಾಪನೆ ಹಾಗೂ ತುರ್ತು ನೆರವು ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಹೊಳೆ ಹಾಗೂ ನದಿ ದಾಟಲು ಯತ್ನಿಸಬಾರದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



