ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಗುರುತು ಪತ್ತೆಗೆ ಪೊಲೀಸರ ತೀವ್ರ ಶೋಧ

Jul 29, 2026 - 12:01
 0  160
ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಗುರುತು ಪತ್ತೆಗೆ ಪೊಲೀಸರ ತೀವ್ರ ಶೋಧ

ಆಪ್ತ ನ್ಯೂಸ್ ಕಾರವಾರ:

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಬುಧವಾರ ಮುಂಜಾನೆ ಪತ್ತೆಯಾಗಿದ್ದು, ಗುರುತು ಪತ್ತೆಗಾಗಿ ಕಾರವಾರ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಂಗಳವಾರ ಸಂಜೆ ವಾರ್‌ಶಿಪ್ ಮ್ಯೂಸಿಯಂ ಹಿಂಭಾಗದ ಕಡಲತೀರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಬಳಿಯಿದ್ದ ಬ್ಯಾಗ್ ಅನ್ನು ಕಡಲತೀರದಲ್ಲೇ ಬಿಟ್ಟು ಸಮುದ್ರದತ್ತ ನಡೆದಿದ್ದರು. ಬಳಿಕ ಅವರು ಸಮುದ್ರಕ್ಕೆ ಇಳಿದ ಕೆಲವೇ ಕ್ಷಣಗಳಲ್ಲಿ ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಕಾಣೆಯಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ವ್ಯಕ್ತಿ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರವಾರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತಕ್ಷಣ ಲೈಫ್‌ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಸಮುದ್ರದ ಅಬ್ಬರ ಹಾಗೂ ಕತ್ತಲಿನ ಕಾರಣದಿಂದ ರಾತ್ರಿ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಬುಧವಾರ ಬೆಳಿಗ್ಗೆ ದಿವೇಕರ್ ಕಾಲೇಜು ಹಿಂಭಾಗದ ಸಮುದ್ರ ತೀರದಲ್ಲಿ ಶವ ತೇಲಿ ಬಂದಿರುವುದನ್ನು ಸಾರ್ವಜನಿಕರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೃತದೇಹವನ್ನು ಸಮುದ್ರದಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಪ್ರಾಥಮಿಕ ಪರಿಶೀಲನೆಯಲ್ಲಿ ಮೃತ ವ್ಯಕ್ತಿಯು ತೀರದಲ್ಲಿ ಬಿಟ್ಟುಹೋಗಿದ್ದ ಬ್ಯಾಗ್‌ನಲ್ಲಿ ಬಟ್ಟೆಗಳು, ಬೆಡ್‌ಶೀಟ್ ಹಾಗೂ ಟೋಪಿ ಪತ್ತೆಯಾಗಿವೆ. ಆದರೆ ಯಾವುದೇ ಗುರುತಿನ ಚೀಟಿ ಅಥವಾ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಮೃತನ ಗುರುತು ಇನ್ನೂ ದೃಢಪಟ್ಟಿಲ್ಲ. ಬ್ಯಾಗ್‌ನಲ್ಲಿದ್ದ ವಸ್ತುಗಳ ಆಧಾರದ ಮೇಲೆ ಮೃತನ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿ ಯಾರು, ಅವರು ಯಾವ ಊರಿನವರು ಹಾಗೂ ಯಾವ ಕಾರಣಕ್ಕಾಗಿ ಸಮುದ್ರಕ್ಕೆ ಇಳಿದಿದ್ದರು ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಪತ್ತೆ ಪ್ರಕರಣಗಳ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಕಡಲತೀರಗಳಿಗೆ ಭೇಟಿ ನೀಡುವ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಪಾಯದ ಪ್ರದೇಶಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಹಾಗೂ ಲೈಫ್‌ಗಾರ್ಡ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0