ತೋಟದ ಮನೆಯಲ್ಲಿ ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು

Aug 26, 2026 - 10:27
 0  125
ತೋಟದ ಮನೆಯಲ್ಲಿ ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು
ಎಐ ಮೂಲಕ ಚಿತ್ರಿತ ಸಾಂದರ್ಭಿಕ ಚಿತ್ರ

ಆಪ್ತ ನ್ಯೂಸ್ ಶಿರಸಿ:

ಕಳೆದ ನಾಲ್ಕಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತೋಟದ ಮನೆಯಲ್ಲಿ ಕುಳಿತಿದ್ದ ವೇಳೆ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶಿರಸಿ ತಾಲೂಕಿನ ಸಣ್ಣಕೇರಿಯಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ಮೂಲತಃ ಕುಮಟಾ ತಾಲೂಕಿನ ಬಾಸೊಳ್ಳಿ, ಸಂತೆಗುಳಿ ನಿವಾಸಿಯಾಗಿದ್ದು, ಸದ್ಯ ಶಿರಸಿಯ ಸಣ್ಣಕೇರಿಯಲ್ಲಿ ವಾಸವಾಗಿದ್ದ ಹರೀಶ ಬಡಿಯಾ ಗೌಡ (42) ಎಂದು ಗುರುತಿಸಲಾಗಿದೆ.

ಹರೀಶ ಬಡಿಯಾ ಗೌಡ ಅವರು ಕಳೆದ ನಾಲ್ಕಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಸಣ್ಣಕೇರಿಯ ಶಿವಾನಂದ ಭಟ್ ಅವರ ತೋಟದ ಮನೆಗೆ ತೆರಳಿದ್ದ ಅವರು, ಅಲ್ಲಿನ ಸೋಫಾದ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಏಕಾಏಕಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗಮನಿಸಿದವರು ನೆರವಿಗೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಹಠಾತ್ ಸಂಭವಿಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ದುಃಖಕ್ಕೆ ಕಾರಣವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ಪ್ರಕರಣದ ತನಿಖೆಯ ಬಳಿಕ ತಿಳಿದುಬರಬೇಕಿದೆ.

ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0