ನದಿ ತಿರುವು ಯೋಜನೆ ವಿರೋಧಿ ಹೋರಾಟ ತೀವ್ರಗೊಳಿಸಲು ನಿರ್ಧಾರ: ಸ್ವರ್ಣವಲ್ಲೀ ಶ್ರೀ
ಸೆ. 3ರಂದು ಗೋಕರ್ಣ–ಕಾರವಾರ ಚಲೋ; ಅ. 2ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ | ಯಲ್ಲಾಪುರದಲ್ಲಿ ರಾಸ್ತಾ ರೋಖೋಗೆ ತೀರ್ಮಾನ
ಆಪ್ತ ನ್ಯೂಸ್ ಶಿರಸಿ:
ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧದ ಹೋರಾಟವನ್ನು ಸಮರೋಪಾದಿಯಲ್ಲಿ ಇನ್ನಷ್ಟು ತೀವ್ರಗೊಳಿಸುವುದು ಅನಿವಾರ್ಯ ಎಂದು ಶ್ರೀಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕರೆ ನೀಡಿದರು.
ಸ್ವರ್ಣವಲ್ಲೀ ಮಠದಲ್ಲಿ ಬುಧವಾರ ನಡೆದ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿ ವಿಶೇಷ ಸಭೆಯಲ್ಲಿ ಚಳುವಳಿಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಿತು. ಸಭೆಯ ಬಳಿಕ ತಮ್ಮ ನಿಲುವು ಸ್ಪಷ್ಟಪಡಿಸಿದ ಶ್ರೀಗಳು, “ಸಮರೋಪಾದಿಯಲ್ಲಿ ನಮ್ಮ ಚಳುವಳಿಯನ್ನು ತೀವ್ರಗೊಳಿಸಬೇಕಿದೆ. ಮುಖ್ಯವಾಗಿ ಕರಾವಳಿ ಭಾಗದ ಜನರು ಸಂಪೂರ್ಣವಾಗಿ ಕೈಜೋಡಿಸಿಕೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಂಗಳೂರಿನಲ್ಲಿ ಎನ್‌ಡಬ್ಲ್ಯೂಡಿಎ ವಿಜ್ಞಾನಿಗಳೊಂದಿಗೆ ನಡೆದ ಚರ್ಚೆಯ ಕುರಿತು ಮಾಹಿತಿ ನೀಡಿದರು. ತಮ್ಮ ನಿಯೋಗದಲ್ಲಿದ್ದ ತಜ್ಞರು ಮಂಡಿಸಿದ ಹಲವು ಪ್ರಶ್ನೆಗಳಿಗೆ ಎನ್‌ಡಬ್ಲ್ಯೂಡಿಎ ವಿಜ್ಞಾನಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ಕರಾವಳಿ ಭಾಗದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ವಿಶ್ವನಾಥ ಶೀಗೇಹಳ್ಳಿ ಹಾಗೂ ಪ್ರಮೋದ್ ವೈದ್ಯ ಮತ್ತಿಘಟ್ಟ ಮಾತನಾಡಿ, ಕರಾವಳಿ ಭಾಗದಲ್ಲಿ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಜನರಿಂದ ವ್ಯಾಪಕ ಬೆಂಬಲ ಸಿಗುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಶ್ರೀಮನ್ ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್.ವಿ. ಹೆಗಡೆ ಮುತ್ತಿಗೆ, ಜಿ.ಆರ್. ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ.ಕೆ. ಭಟ್ ಯಡಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ, ಜಿ.ಎನ್. ಹೆಗಡೆ ಕಣ್ಣಿಮನೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಅನಂತ ಭಟ್ ಹುಳಗೋಳ ವಂದಿಸಿದರು.
ಹೋರಾಟಕ್ಕೆ ದಿನಾಂಕ ನಿಗದಿ
ನದಿ ತಿರುವು ಯೋಜನೆ ವಿರುದ್ಧ ಹೋರಾಟವನ್ನು ವ್ಯವಸ್ಥಿತವಾಗಿ ಮುಂದುವರಿಸಲು ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
-
ಸೆಪ್ಟೆಂಬರ್ 3ರಂದು ಗೋಕರ್ಣ–ಕಾರವಾರ ಚಲೋ
-
ಅಕ್ಟೋಬರ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
-
ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ರಾಸ್ತಾ ರೋಖೋ ಚಳುವಳಿ
-
ಯೋಜನೆ ವಿರುದ್ಧ ಕಾನೂನು ಹೋರಾಟ ಮುಂದುವರಿಕೆ
ಇದರೊಂದಿಗೆ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯ ಡಿಪಿಆರ್ ಸಿದ್ಧಪಡಿಸದಂತೆ ಜಿಲ್ಲೆಯ ಜನಪ್ರತಿನಿಧಿಗಳು ಒಮ್ಮತದಿಂದ ತಮ್ಮ ಗಟ್ಟಿಯಾದ ನಿಲುವನ್ನು ವ್ಯಕ್ತಪಡಿಸಬೇಕು ಎಂಬ ಒಕ್ಕೊರಲ ಆಗ್ರಹವೂ ಸಭೆಯಲ್ಲಿ ಕೇಳಿಬಂತು.
ನದಿ ತಿರುವು ಯೋಜನೆ ವಿರುದ್ಧದ ಹೋರಾಟವನ್ನು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮತ್ತಷ್ಟು ಸಂಘಟಿತಗೊಳಿಸಿ, ಜನಬೆಂಬಲದೊಂದಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಭೆ ನಿರ್ಧರಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



