ರೈತರ ಜಮೀನು ವಶಕ್ಕೆ ಪಡೆಯುವ ಕ್ರಮ ಖಂಡನೀಯ: ಅನಂತಮೂರ್ತಿ ಹೆಗಡೆ

Aug 24, 2026 - 09:50
 0  54
ರೈತರ ಜಮೀನು ವಶಕ್ಕೆ ಪಡೆಯುವ ಕ್ರಮ ಖಂಡನೀಯ: ಅನಂತಮೂರ್ತಿ ಹೆಗಡೆ

ಆಪ್ತ ನ್ಯೂಸ್ ಶಿರಸಿ:

“ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿಗೂ ತನ್ನ ಕೊನೆಯ ಆಸೆಯನ್ನು ಹೇಳಿಕೊಳ್ಳಲು ಅವಕಾಶವಿದೆ. ಆದರೆ ರೈತರಿಗೆ ತಮ್ಮ ಅಹವಾಲು, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ಆಕ್ರಮಣಕಾರಿ ರೀತಿಯಲ್ಲಿ ಬಂದು ಜಮೀನು ವಶಪಡಿಸಿಕೊಂಡು ಗಿಡಗಳನ್ನು ನೆಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಕ್ರಮ” ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಗೋಳಿಕಟ್ಟಾ ಗ್ರಾಮದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಹಕಾರಿ ಸಂಸ್ಥೆಗೆ ಸಂಬಂಧಿಸಿದ ಜಾಗದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ರೈತರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಕಾಮಧೇನು ಸಂಸ್ಥೆಗೆ ಸಂಬಂಧಿಸಿದ ಜಾಗದಲ್ಲಿ ಹಲವು ವರ್ಷಗಳಿಂದ ರೈತರು ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ತಮ್ಮ ಜೀವನ ಸಾಗಿಸುತ್ತಿದ್ದಾರೆ. ದಶಕಗಳಿಂದ ಈ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರನ್ನು ಏಕಾಏಕಿ ತೆರವುಗೊಳಿಸುವ ಕ್ರಮ ಸರಿಯಲ್ಲ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

“ಇಲ್ಲಿರುವ ರೈತರು ಪಾಕಿಸ್ತಾನದವರಲ್ಲ, ಬಾಂಗ್ಲಾದೇಶದಿಂದ ಬಂದವರೂ ಅಲ್ಲ. ಅವರೆಲ್ಲರೂ ಭಾರತದ ಪ್ರಜೆಗಳು. ಸರ್ಕಾರ ಅವರಿಗೆ ಮತದಾನದ ಹಕ್ಕು ನೀಡಿದೆ. ರೈತರು ಸರ್ಕಾರಕ್ಕೆ ಕಂದಾಯವನ್ನೂ ಪಾವತಿಸುತ್ತಿದ್ದಾರೆ. ಹೀಗಿರುವಾಗ ಅವರ ಮೇಲೆ ಏಕಾಏಕಿ ದೌರ್ಜನ್ಯ ನಡೆಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೂ ಕಾನೂನಿನಲ್ಲಿ ನಿರ್ದಿಷ್ಟವಾದ ಕ್ರಮಗಳು ಹಾಗೂ ನಿಯಮಗಳಿವೆ. ಜಾಗವನ್ನು ಖಾಲಿ ಮಾಡಿಸುವುದಾಗಲಿ, ವಶಕ್ಕೆ ಪಡೆಯುವುದಾಗಲಿ ಏಕಾಏಕಿ ನಡೆಸದೆ ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡಿ, ಅಗತ್ಯ ಕಾಲಾವಕಾಶ ನೀಡಬೇಕಿತ್ತು ಎಂದು ಅವರು ಹೇಳಿದರು.

ರೈತರ ಹೇಳಿಕೆಯ ಪ್ರಕಾರ, ತಡರಾತ್ರಿ ಇಂಗ್ಲಿಷ್ ಭಾಷೆಯಲ್ಲಿರುವ ಸುಮಾರು 20 ಪುಟಗಳ ಆದೇಶದ ಪ್ರತಿಯನ್ನು ನೀಡಿ ತೆರಳಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಜೆಸಿಬಿ ಯಂತ್ರಗಳು ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

“ಮುಂಜಾನೆ ಐದು ಗಂಟೆಗೆ ಜೆಸಿಬಿ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಂದು ಜಾಗ ತೆರವುಗೊಳಿಸುವ ಅಗತ್ಯವೇನಿತ್ತು? ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡಿ, ಅವರ ಅಹವಾಲು ಆಲಿಸಲು ಅವಕಾಶ ನೀಡಬಹುದಿತ್ತು. ಈ ರೀತಿಯ ಕಾರ್ಯಾಚರಣೆಯ ಹಿಂದೆ ಯಾವುದಾದರೂ ದೊಡ್ಡ ಹುನ್ನಾರ ಇದೆಯೇ ಎಂಬ ಅನುಮಾನ ಮೂಡುತ್ತಿದೆ” ಎಂದು ಅವರು ಆರೋಪಿಸಿದರು.

ಅರಣ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮೇಲೆ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದರು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರ ಹೋರಾಟಕ್ಕೆ ಬಿಜೆಪಿ ರೈತ ಮೋರ್ಚಾ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

65 ವರ್ಷಗಳಿಂದ ಕೃಷಿಯನ್ನೇ ನಂಬಿಕೊಂಡಿರುವ ರೈತರು

ಈ ಪ್ರದೇಶದಲ್ಲಿ ಸುಮಾರು 65 ವರ್ಷಗಳಿಂದ ನೆಲೆಸಿದ್ದು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರ ಸಮಸ್ಯೆಯನ್ನು ಸರ್ಕಾರ ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದು ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.

“ದಶಕಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿರುವ ರೈತರನ್ನು ಸರ್ಕಾರ ಗುರುತಿಸಬೇಕು. ಸಾಧ್ಯವಾದಷ್ಟು ಭೂಮಿಯನ್ನು ಅವರಿಗೆ ಮಂಜೂರು ಮಾಡುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸಬೇಕು. ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಿದರೆ ಅವರು ಎಲ್ಲಿಗೆ ಹೋಗಬೇಕು? ಜೀವನೋಪಾಯ ಕಳೆದುಕೊಂಡು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದರು.

ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮವನ್ನು ಮರುಪರಿಶೀಲಿಸಬೇಕು. ರೈತರೊಂದಿಗೆ ಚರ್ಚಿಸಿ ಕಾನೂನುಬದ್ಧ ಹಾಗೂ ಮಾನವೀಯ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

“ರೈತರ ಬದುಕು ಹಾಳಾಗುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ. ರೈತರ ಹೋರಾಟದೊಂದಿಗೆ ನಾವು ನಿಲ್ಲುತ್ತೇವೆ. ಸರ್ಕಾರ ರೈತರ ಪರವಾಗಿ ನಿಂತು ಅವರಿಗೆ ನ್ಯಾಯ ಒದಗಿಸಬೇಕು” ಎಂದು ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0