ಮಹಿಳೆಯರ ಸ್ವಾವಲಂಬನೆಗೆ ಹೊಲಿಗೆ ತರಬೇತಿ: ಕುಚಗುಂಡಿ–ತಾರೇಸರದಲ್ಲಿ ಉಚಿತ ಶಿಬಿರಕ್ಕೆ ಚಾಲನೆ

Sep 1, 2026 - 08:38
 0  63
ಮಹಿಳೆಯರ ಸ್ವಾವಲಂಬನೆಗೆ ಹೊಲಿಗೆ ತರಬೇತಿ: ಕುಚಗುಂಡಿ–ತಾರೇಸರದಲ್ಲಿ ಉಚಿತ ಶಿಬಿರಕ್ಕೆ ಚಾಲನೆ

ಆಪ್ತ ನ್ಯೂಸ್‌ ಕಾನಸೂರು:

ಮಹಿಳೆಯರು ಮನೆಯಲ್ಲೇ ಕುಳಿತು ಕೌಶಲ್ಯವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿದ್ದಾಪುರ ತಾಲೂಕಿನ ಕುಚಗುಂಡಿ ಹಾಗೂ ತಾರೇಸರದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಿಸಲಾಗಿದೆ.

ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಸಭಾಂಗಣ ಹಾಗೂ ತಾರೇಸರದ ಸಭಾಭವನದಲ್ಲಿ ಆಯೋಜಿಸಿರುವ ತರಬೇತಿ ಶಿಬಿರಕ್ಕೆ ಸೋಮವಾರ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಗ್ರಾಮೀಣ ಭಾಗದ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸಲು ನೆರವಾಗುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದರು.

“ಬದುಕಿನ ದೊಡ್ಡ ಸಮಸ್ಯೆ ಎಂದರೆ ಬಡತನ. ಅದನ್ನು ನಿವಾರಿಸಲು ಸ್ವ ಉದ್ಯೋಗ ಪ್ರಮುಖ ಮಾರ್ಗ. ಹೊಲಿಗೆ ಕಲಿತ ಮಹಿಳೆಯರು ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಹೊಲಿಗೆ ಸೇರಿದಂತೆ ಯಾವುದಾದರೂ ಕೌಶಲ್ಯವನ್ನು ಕಲಿತುಕೊಳ್ಳಬೇಕು” ಎಂದು ಅವರು ಹೇಳಿದರು.

ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಬದುಕನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಬಹುದು. ಮೊದಲು ಕಲಿಯಬೇಕು, ನಂತರ ಸಂಪಾದಿಸಬೇಕು ಎಂಬ ಆಶಯದೊಂದಿಗೆ ತರಬೇತಿ ಆಯೋಜಿಸಲಾಗಿದೆ. ನುರಿತ ತರಬೇತುದಾರರಿಂದ ಒಂದು ತಿಂಗಳ ಕಾಲ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಹೊಲಿಗೆ ಯಂತ್ರವನ್ನೂ ಒದಗಿಸಲಾಗಿದೆ. ಮಹಿಳೆಯರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳೆಯರು ಕೌಶಲ್ಯ ಪಡೆದು ಸ್ವಂತ ಉದ್ಯೋಗ ಆರಂಭಿಸುವುದರಿಂದ ಕುಟುಂಬದ ಆದಾಯ ಹೆಚ್ಚುವುದರ ಜತೆಗೆ ಆತ್ಮವಿಶ್ವಾಸವೂ ವೃದ್ಧಿಯಾಗಲಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಆತ್ಮೀಯತೆ ಹಾಗೂ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಸ್ವ ಉದ್ಯೋಗದ ಶಕ್ತಿ ಬರಬೇಕು

ಹಸ್ರಗೋಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಬೇಕು ಎಂಬುದು ಅನಂತಮೂರ್ತಿ ಹೆಗಡೆಯವರ ಬಹುದಿನಗಳ ಕನಸಾಗಿತ್ತು. ಇದೀಗ ಆ ಕನಸು ನನಸಾಗುತ್ತಿರುವುದು ಸಂತಸದ ಸಂಗತಿ ಎಂದರು.

ಮಹಿಳೆಯರು ಸ್ವ ಉದ್ಯೋಗದ ಮೂಲಕ ಕುಟುಂಬ ನಿರ್ವಹಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು. ಆರ್ಥಿಕ ಸ್ವಾವಲಂಬನೆ ಮಹಿಳೆಯರ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಆಶಯದೊಂದಿಗೆ ಆರಂಭಿಸಿರುವ ತರಬೇತಿ ಶಿಬಿರ ಗ್ರಾಮೀಣ ಮಹಿಳೆಯರಿಗೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಆರ್ಥಿಕ ಸದೃಢತೆಗೆ ಸರಳ ಮಾರ್ಗ

ನಾರಾಯಣ ಹೆಗಡೆ ತಾರೇಸರ ಮಾತನಾಡಿ, ಹೊಲಿಗೆ ಕಲಿಯುವುದು ಆರ್ಥಿಕವಾಗಿ ಸ್ವಾವಲಂಬಿಯಾಗಲು ಇರುವ ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ತಮ್ಮೂರಿನಲ್ಲಿಯೇ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಗೊಂಡಿರುವುದು ಸಂತಸದ ಸಂಗತಿ ಎಂದರು.

ತರಬೇತಿ ಪಡೆದ ಮಹಿಳೆಯರು ಮುಂದೆ ಸ್ವಂತವಾಗಿ ಹೊಲಿಗೆ ಕೆಲಸ ಕೈಗೊಂಡು ಆದಾಯ ಗಳಿಸುವುದರ ಜತೆಗೆ ಇತರರಿಗೂ ಉದ್ಯೋಗದ ಅವಕಾಶ ಕಲ್ಪಿಸುವಂತಾಗಬೇಕು ಎಂದು ಆಶಿಸಿದರು.

“ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ”

ಸ್ಥಳೀಯ ಪ್ರಮುಖರಾದ ಕಮಲಾಕರ ನಾಯ್ಕ ಹೆರೂರು ಮಾತನಾಡಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಜಾತಿ–ಭೇದವಿಲ್ಲದೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಅನಂತಮೂರ್ತಿ ಹೆಗಡೆಯವರ ವ್ಯಕ್ತಿತ್ವ ಶ್ಲಾಘನೀಯವಾಗಿದೆ ಎಂದರು.

“ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಸಹಕಾರ ಮನೋಭಾವದಿಂದ ಹಲವು ಕಾರ್ಯಗಳನ್ನು ಕೈಗೊಂಡಿರುವ ಇಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ವಿರಳ. ಇದೀಗ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ಉಚಿತ ಹೊಲಿಗೆ ತರಬೇತಿ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ. ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ, ಆರ್.ಜಿ. ಭಟ್ ಯಲೂಗಾರ, ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ, ನವೀನ ಹೆಗಡೆ ತಾರೇಸರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತರಬೇತುದಾರರಾದ ವೀಣಾ ಕೊಳಗಿಬೀಸ್ ಹಾಗೂ ಆಶಾ ಶಿರಸಿ ಅವರು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದಾರೆ.

ಕೌಶಲ್ಯ ಕಲಿತು, ಮನೆಯಲ್ಲೇ ಉದ್ಯೋಗ ಆರಂಭಿಸಿ, ಸ್ವಂತ ಆದಾಯ ಗಳಿಸುವ ಅವಕಾಶವನ್ನು ಗ್ರಾಮೀಣ ಮಹಿಳೆಯರಿಗೆ ಕಲ್ಪಿಸುವ ಮೂಲಕ ಈ ಶಿಬಿರವು ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0