ಟಿಬೆಟಿಯನ್ ಕಾಲೋನಿಯಲ್ಲಿ ಕಳ್ಳರ ಕೈಚಳಕ: 4.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಕಳವು
ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಕಳ್ಳತನ; ಟ್ರಜರಿ ಒಡೆದು ಆಭರಣ ಹೊತ್ತೊಯ್ದ ಕಳ್ಳರು
ಆಪ್ತ ನ್ಯೂಸ್ ಮುಂಡಗೋಡ:
ಮನೆಗೆ ಬೀಗ ಹಾಕಿ ಹೊರಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯೊಳಗೆ ನುಗ್ಗಿ ಸುಮಾರು 4.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ.4ರಲ್ಲಿ ನಡೆದಿದೆ.
ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ.4ರ 76(ಎ)ನೇ ಮನೆಯಲ್ಲಿ ವಾಸವಿರುವ ನವಾಂಗ್ ಟೆಂಡನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸೆಪ್ಟೆಂಬರ್ 8ರ ಮಧ್ಯಾಹ್ನ 3 ಗಂಟೆಯಿಂದ ಸೆಪ್ಟೆಂಬರ್ 9ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವುದಾಗಿ ತಿಳಿದುಬಂದಿದೆ.
ಮನೆಯ ಮುಂಭಾಗದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಯಾವುದೋ ವಸ್ತುವಿನ ಸಹಾಯದಿಂದ ತೆರೆಯಲಾಗಿದೆ ಎನ್ನಲಾಗಿದ್ದು, ಬಳಿಕ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ. ಕೋಣೆಯಲ್ಲಿದ್ದ ಟ್ರಜರಿಯನ್ನು ತೆರೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಕಳುವಾದ ವಸ್ತುಗಳಲ್ಲಿ 15 ಗ್ರಾಂ ತೂಕದ ಬಂಗಾರದ ಸರ, 25 ಗ್ರಾಂ ತೂಕದ ಬಂಗಾರದ ಬಿಸ್ಕೆಟ್ ಚೈನ್, ಏಳು ಬಳೆಗಳು ಹಾಗೂ ಒಂದು ಬೆಳ್ಳಿಯ ದೀಪ ಸೇರಿವೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 4.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0