ಕ್ಷೇತ್ರ ಗಡಿ ದೃಢೀಕರಣಕ್ಕೆ ಒತ್ತಾಯ: ನಿವೃತ್ತ ಯೋಧನ ಅರಣ್ಯ ಭೂಮಿ ತೆರವು ಪ್ರಯತ್ನಕ್ಕೆ ಅರಣ್ಯವಾಸಿಗಳ ತೀವ್ರ ಆಕ್ರೋಶ
150ಕ್ಕೂ ಹೆಚ್ಚು ಪೊಲೀಸ್–ಅರಣ್ಯ ಸಿಬ್ಬಂದಿ ನಿಯೋಜನೆ; ಹಲವು ಗಂಟೆಗಳ ವಾಗ್ವಾದದ ಬಳಿಕ ಕಾರ್ಯಾಚರಣೆ ಭಾಗಶಃ ಸೀಮಿತ
ಆಪ್ತ ನ್ಯೂಸ್ ಸಿದ್ದಾಪುರ:
ನಿವೃತ್ತ ಯೋಧ ಹಾಗೂ ಅರಣ್ಯವಾಸಿಯಾದ ಹೊಸೂರು ಗ್ರಾಮದ ಕೃಷ್ಣ ದ್ಯಾವ ನಾಯ್ಕ ಅವರ ಸಾಗುವಳಿ ಜಮೀನನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ಶನಿವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕ್ಷೇತ್ರದ ನಿಖರ ಗಡಿರೇಖೆ ದೃಢೀಕರಿಸದೇ ಒಕ್ಕಲೆಬ್ಬಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ ಅರಣ್ಯವಾಸಿಗಳು ಮತ್ತು ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೊದಲು ಕ್ಷೇತ್ರದ ಗಡಿ ಗುರುತಿಸಿ ನಂತರವೇ ಯಾವುದೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತು. ಮೀಸಲು ಪೊಲೀಸ್ ವಾಹನಗಳು, ಅರಣ್ಯ ಇಲಾಖೆಯ ಜೀಪುಗಳು ಸೇರಿದಂತೆ ಭಾರೀ ಬಂದೋಬಸ್ತ್ ಕಲ್ಪಿಸಲಾಗಿದ್ದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ನಿವೃತ್ತ ಯೋಧನ ವಿರುದ್ಧ ತೆರವು ಆದೇಶ
26 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅರಣ್ಯವಾಸಿ ಕೃಷ್ಣ ದ್ಯಾವ ನಾಯ್ಕ ಅವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರವು ಜುಲೈ 27ರಂದು ಅರಣ್ಯ ಭೂಮಿಯನ್ನು ತಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಈ ಆದೇಶದ ಅನುಸಾರ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದರು.
ಆದರೆ, ಹೋರಾಟಗಾರರ ಪ್ರಕಾರ ತೆರವು ಕಾರ್ಯಾಚರಣೆಗೆ ಮುನ್ನ ಕಾನೂನು ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ. ನೋಟಿಸ್ ನೀಡದೇ, ಕ್ಷೇತ್ರದ ಗಡಿಯನ್ನು ಸ್ಪಷ್ಟಪಡಿಸದೇ ಹಾಗೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಏಕಾಏಕಿ ಭಾರೀ ಸಂಖ್ಯೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ವಾದಿಸಿದರು.
"ಮೊದಲು ಕ್ಷೇತ್ರ ಗಡಿ ಗುರುತಿಸಿ"
ಸ್ಥಳದಲ್ಲಿ ಹಲವು ಗಂಟೆಗಳ ಕಾಲ ಅಧಿಕಾರಿಗಳು, ಅರಣ್ಯವಾಸಿಗಳು ಹಾಗೂ ಹೋರಾಟಗಾರರ ನಡುವೆ ತೀವ್ರ ಚರ್ಚೆ, ವಾದ-ವಿವಾದ ನಡೆಯಿತು. ಸಾಗುವಳಿ ಜಮೀನಿನ ನಿಖರ ಗಡಿಯನ್ನು ಸರ್ವೆ ಮೂಲಕ ದೃಢೀಕರಿಸದೇ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಅರಣ್ಯ ಇಲಾಖೆ ಕಾನೂನು ವಿಧಿ-ವಿಧಾನಗಳನ್ನು ಪಾಲಿಸದೇ ಕ್ರಮ ಕೈಗೊಳ್ಳುತ್ತಿರುವುದು ಅರಣ್ಯ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದರು.
ದಿಶಾಂಕ್ ಕುರಿತು ಪ್ರಶ್ನೆ
ತೆರವು ಕಾರ್ಯಾಚರಣೆ ವೇಳೆ ಮತ್ತೊಂದು ವಿವಾದವೂ ಎದುರಾಯಿತು. ಅಧಿಕಾರಿಗಳು ಸರ್ವೆ ಸಂಖ್ಯೆ 51 ಅನ್ನು ಸಾಗುವಳಿ ಕ್ಷೇತ್ರ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ, ಹೋರಾಟಗಾರರು ರಾಜ್ಯ ಸರ್ಕಾರದ 'ದಿಶಾಂಕ್' (Dishaank) ಆ್ಯಪ್ ಮೂಲಕ ಸ್ಥಳ ಪರಿಶೀಲನೆ ನಡೆಸಿದರು.
ಅವರ ಪ್ರಕಾರ, ದಿಶಾಂಕ್‌ನಲ್ಲಿ ಪರಿಶೀಲಿಸಿದಾಗ ಸ್ಥಳವು ಸರ್ವೆ ಸಂಖ್ಯೆ 159 ಎಂದು ತೋರಿಸುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಹಾಗೂ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರನ್ನು ಪ್ರಶ್ನಿಸಿದಾಗ, "ದಿಶಾಂಕ್ ದಾಖಲೆಗಳನ್ನು ಅಂತಿಮ ಹಾಗೂ ನಂಬಲರ್ಹ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂಬ ಉತ್ತರ ನೀಡಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.
ಪೊಲೀಸ್ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿ
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪೊಲೀಸ್ ಅಧಿಕಾರಿಗಳು ಎರಡೂ ಪಕ್ಷಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ ಪರಿಣಾಮ ಪರಿಸ್ಥಿತಿ ಶಾಂತಗೊಂಡಿತು.
ಇದಾದ ನಂತರ ಸಾಗುವಳಿ ಪ್ರದೇಶದಲ್ಲಿದ್ದ ಬೇಲಿ, ಮರ ಹಾಗೂ ಬೆಳೆಗಳಿಗೆ ಯಾವುದೇ ಹಾನಿಯಾಗದಂತೆ, ಕೇವಲ ಕ್ಷೇತ್ರದ ಹೊರಭಾಗದಲ್ಲಿ ಅಗಳ (ಟ್ರೆಂಚ್) ತೆಗೆಯುವ ಕಾರ್ಯಕ್ಕೆ ಮಾತ್ರ ತೆರವು ಕಾರ್ಯಾಚರಣೆಯನ್ನು ಸೀಮಿತಗೊಳಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ ಹಾಗೂ ತಾಲೂಕು ಸಂಚಾಲಕ ಸಂಕೇತ್ ನಾಯ್ಕ ತಿಳಿಸಿದ್ದಾರೆ.
"ಮಾನವೀಯತೆ ಮೀರಿದ ಕ್ರಮ" – ಹೋರಾಟಗಾರರ ಆಕ್ರೋಶ
ಘಟನೆಯ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ದೇಶಕ್ಕಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬದ ಮೇಲೆ ಇಂತಹ ರೀತಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ತೆರವು ಕಾರ್ಯಾಚರಣೆ ನಡೆಸಿರುವುದು ಅತ್ಯಂತ ಮಾನವೀಯತೆ ಮೀರಿದ ಕ್ರಮವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಅರಣ್ಯ ಇಲಾಖೆ ಕಾನೂನು ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಅನುಸರಿಸಿ, ಕ್ಷೇತ್ರದ ಗಡಿ ಸ್ಪಷ್ಟಪಡಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸ್ಥಳದಲ್ಲಿದ್ದ ಅಧಿಕಾರಿಗಳು
ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಗೀತಾ ಪಾಟೀಲ್, ಎಸಿಎಫ್ ಅಮಿತ್, ಆರ್‌ಎಫ್‌ಒ ಉಷಾ ಕಬ್ಬೇರ್, ಸಿಪಿಐ ಸೀತಾರಾಮ, ಪಿಎಸ್‌ಐ ಶಾಂತಿನಾಥ, ನಾಗಪ್ಪ ಭೋವಿ, ಉಪ ತಹಶೀಲ್ದಾರ್ ಡಿ.ಎಂ. ನಾಯ್ಕ, ಸರ್ವೆ ಇಲಾಖೆಯ ಗಣೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಇದೇ ವೇಳೆ ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ, ಸಂಕೇತ್ ನಾಯ್ಕ, ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಸೇರಿದಂತೆ ಹಲವರು ಸ್ಥಳದಲ್ಲಿದ್ದು ಅರಣ್ಯವಾಸಿಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



