ನದಿ ತಿರುವು ಯೋಜನೆ ವಿರುದ್ಧ ಹೋರಾಟ ತೀವ್ರ: ಜೂ.15ರಂದು ಶಿರಸಿಯಲ್ಲಿ ಬೃಹತ್ ಪತ್ರ ಚಳವಳಿ
ಆಪ್ತ ನ್ಯೂಸ್ ಶಿರಸಿ:
ಬೇಡ್ತಿ–ವರದಾ ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆ ವಿರೋಧಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಅಘನಾಶಿನಿ–ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ನಿರ್ಧರಿಸಿದೆ. ಇದರ ಭಾಗವಾಗಿ ಜೂನ್ 15ರಂದು ಬೆಳಿಗ್ಗೆ 10.30ಕ್ಕೆ ನಗರದ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಬೃಹತ್ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ನಗರದ ಯೋಗ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ವಿರೋಧವಾಗಿ ವಿವಿಧ ರೀತಿಯ ಹೋರಾಟಗಳು ನಡೆದಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜನರ ಒತ್ತಡ ಹೆಚ್ಚಿಸಲು ಚಳವಳಿಯನ್ನು ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಡಿಪಿಆರ್‌ಗೆ ತಡೆ ನೀಡುವಂತೆ ಆಗ್ರಹ
ಪತ್ರ ಚಳವಳಿಯ ಮೂಲಕ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್)ಗೆ ತಡೆ ನೀಡಬೇಕು ಎಂದು ಸರ್ಕಾರವನ್ನು ಬಲವಾಗಿ ಒತ್ತಾಯಿಸಲಾಗುವುದು. ಇದೇ ತಿಂಗಳ ಅಂತ್ಯದಲ್ಲಿ ಸಂರಕ್ಷಣಾ ಸಮಿತಿಯ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಡಿಪಿಆರ್ ಹಿಂತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
ಅವರು ಮಾತನಾಡುತ್ತಾ, “ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನದಿ ತಿರುವು ಯೋಜನೆ ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಪ್ರಸ್ತಾಪ ಸಲ್ಲಿಕೆಯಾಗಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ” ಎಂದರು.
10 ಸಾವಿರ ಪತ್ರಿಕೆ ವಿತರಣೆ
ಪತ್ರ ಚಳವಳಿ ಸಂಚಾಲಕ ವಿಶ್ವನಾಥ ಹೆಗಡೆ ಶಿಗೇಹಳ್ಳಿ ಮಾತನಾಡಿ, ಈಗಾಗಲೇ ಸುಮಾರು 10 ಸಾವಿರ ಪತ್ರಿಕೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಜೂನ್ 15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಜನರ ಸಮ್ಮುಖದಲ್ಲಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
1 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಬದುಕಿನ ಪ್ರಶ್ನೆ
ಸಮಿತಿಯ ಉಪಾಧ್ಯಕ್ಷ ಹಾಗೂ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಅಘನಾಶಿನಿ ಹಾಗೂ ಬೇಡ್ತಿ ಕೊಳ್ಳಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಟಿಎಸ್‌ಎಸ್ ಮೇಲೆ ಸುಮಾರು 50 ಸಾವಿರ ಕುಟುಂಬಗಳು ಅವಲಂಬಿತವಾಗಿದ್ದು, ಪರೋಕ್ಷವಾಗಿ ಇನ್ನೂ 60 ಸಾವಿರ ಕುಟುಂಬಗಳು ಬದುಕು ನಡೆಸುತ್ತಿವೆ. ಒಟ್ಟಾರೆ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಘನಾಶಿನಿ–ಬೇಡ್ತಿ ಕೊಳ್ಳ ಪ್ರದೇಶದ ಮೇಲೆ ಅವಲಂಬಿತವಾಗಿವೆ ಎಂದು ಹೇಳಿದರು.
“ಯೋಜನೆ ಜಾರಿಯಾದರೆ ಈ ಪ್ರದೇಶದ ಪರಿಸರ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಟಿಎಸ್‌ಎಸ್ ವತಿಯಿಂದಲೂ ಪ್ರತ್ಯೇಕ ಮನವಿ ಸಲ್ಲಿಸಲಾಗುವುದು” ಎಂದು ತಿಳಿಸಿದರು.
ಜಿಲ್ಲೆಯ ಜನತೆ ಒಗ್ಗಟ್ಟಾಗಿ ವಿರೋಧಿಸಬೇಕು
ಸುರೇಶ ಹೆಗಡೆ ಹಕ್ಕಿಮನೆ ಮಾತನಾಡಿ, ನದಿ ತಿರುವು ಯೋಜನೆಯಿಂದ ನದಿ ತೀರದ ನಿವಾಸಿಗಳಷ್ಟೇ ಅಲ್ಲ, ಜಿಲ್ಲೆಯ ಸಮಗ್ರ ಜನತೆಯೂ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಜನರು ಒಗ್ಗಟ್ಟಾಗಿ ಯೋಜನೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಜಿ.ಆರ್. ಹೆಗಡೆ ಬೆಳ್ಳೆಕೇರಿ, ರತ್ನಾಕರ ಬಾಡಲಕೊಪ್ಪ, ಮಧುಮತಿ ಹೆಗಡೆ, ವಿ.ಎಂ. ಭಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಕರೆ ನೀಡಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಪತ್ರ ಚಳವಳಿಯಲ್ಲಿ ಭಾಗವಹಿಸಿ, ಯೋಜನೆ ವಿರೋಧಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಬೇಕು.”
– ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಅಘನಾಶಿನಿ–ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



