ಪ್ರಧಾನಿ ಮೋದಿ ಅವರ 12 ವರ್ಷಗಳ ಜನಸೇವೆಗೆ ವಿಶೇಷ ಪೂಜೆ: ಕಾಳಿಕಾಂಬಾ ದೇವಾಲಯದಲ್ಲಿ ಪರಿಸರ ಕಾಳಜಿ ಅಭಿಯಾನ, ಗಣ್ಯರಿಗೆ ಸನ್ಮಾನ

Jun 11, 2026 - 17:43
 0  85
ಪ್ರಧಾನಿ ಮೋದಿ ಅವರ 12 ವರ್ಷಗಳ ಜನಸೇವೆಗೆ ವಿಶೇಷ ಪೂಜೆ: ಕಾಳಿಕಾಂಬಾ ದೇವಾಲಯದಲ್ಲಿ ಪರಿಸರ ಕಾಳಜಿ ಅಭಿಯಾನ, ಗಣ್ಯರಿಗೆ ಸನ್ಮಾನ

ಆಪ್ತ ನ್ಯೂಸ್ ಸಿದ್ದಾಪುರ:

ದೇಶದ ಪ್ರಧಾನಮಂತ್ರಿಯಾಗಿ ಸುಧೀರ್ಘ 12 ವರ್ಷಗಳ ಕಾಲ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಹಾಗೂ ಜನಪರ ಆಡಳಿತದ ಮೂಲಕ ಸೇವೆ ಸಲ್ಲಿಸುತ್ತಿರುವ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಸಿದ್ದಾಪುರ ತಾಲೂಕಿನ ಶಕ್ತಿದೇವಿ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಹಿರಿಯ ರಾಜಕೀಯ ನಾಯಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಅಭಿವೃದ್ಧಿ ಪಥವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಶಕ್ತಿ, ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಹಸಿರು ಅಭಿಯಾನಕ್ಕೆ ವಿಶೇಷ ಉತ್ತೇಜನ ನೀಡಲಾಯಿತು. ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು, ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿ ಅವರ ಸಾನ್ನಿಧ್ಯದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತ ಗಣ್ಯರಲ್ಲಿ ಹಿರಿಯ ಸಾಹಿತಿ ಆರ್.ಕೆ. ಹೊನ್ನೆಗುಂಡಿ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ರಾಜೇಶ್ ನಾಯ್ಕ್, ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಂತಾ ಎಂ. ಭಟ್ಟ (ಕೇಶವ ಶಿಶು ಮಂದಿರ, ಕೊಂಡ್ಲಿ), ಪ್ರಗತಿಪರ ಜೇನು ಸಾಕಾಣಿಕೆ ಮೂಲಕ ಕೃಷಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಾರುತಿ ಬೋರ್ಕರ್ ಸೇರಿದಂತೆ ಹಲವು ಗಣ್ಯರು ಸೇರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಯುವಜನತೆಗೆ ಪ್ರೇರಣೆಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ್ ಹಣಜಿಬೈಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ತೋಟಪ್ಪ ನಾಯ್ಕ್, ಎಸ್.ಕೆ. ಮೇಸ್ತಾ, ಹಾಗೂ ನಂದನ್ ಬೋರ್ಕರ್, ಸುರೇಶ್ ನಾಯ್ಕ್ ಬಾಲಿಕೊಪ್ಪ, ಮಂಜುನಾಥ ಭಟ್ಟ, ಕೃಷ್ಣಮೂರ್ತಿ ಐಸೂರು, ಶ್ರೀನಿವಾಸ ಹೊಸೂರು, ಪ್ರಭಾಕರ ಕೊಂಡ್ಲಿ, ದಯಾನಂದ ನಾಯ್ಕ್, ವಿನಯ ಹೊನ್ನೆಗುಂಡಿ, ಚಂದ್ರು ಕೊಡಿಯ, ರಾಜೇಂದ್ರ ಕಿಂದ್ರಿ, ರಮೇಶ್ ಚಲವಾದಿ, ಗಿರೀಶ್ ಮಂಡ್ಲಿಕೊಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಹಿರಿಯ-ಕಿರಿಯ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಭಕ್ತಿ, ದೇಶಭಕ್ತಿ, ಪರಿಸರ ಕಾಳಜಿ ಹಾಗೂ ಸಮಾಜಸೇವೆಯ ಮೌಲ್ಯಗಳನ್ನು ಒಟ್ಟುಗೂಡಿಸಿದ ಈ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯಿತು. ಪ್ರಧಾನಿ ಮೋದಿ ಅವರ 12 ವರ್ಷಗಳ ಆಡಳಿತದ ಸಾಧನೆಗಳನ್ನು ಸ್ಮರಿಸುವ ಜೊತೆಗೆ ಸಮಾಜ ಸೇವಕರನ್ನು ಗೌರವಿಸುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0