ಹಳಿಯಾಳದಲ್ಲಿ ಪುಡಿರೌಡಿ ಮಂಜಾ ಅಟ್ಟಹಾಸ! ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ, ಕೊಲೆ ಬೆದರಿಕೆ; ರೌಡಿ ಆರ್ಭಟಕ್ಕೆ ಬೆಚ್ಚಿದ ಜನರು
ಆಪ್ತ ನ್ಯೂಸ್ ಹಳಿಯಾಳ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕುಡಿದ ಮತ್ತಿನಲ್ಲಿ ಪುಡಿರೌಡಿಯೊಬ್ಬ ನಡೆಸಿದ ಅಟ್ಟಹಾಸ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಳಿಯಾಳದ "ರೌಡಿ ಮಂಚ್ ಮಂಜಾ" ಎಂದೇ ಪರಿಚಿತನಾಗಿರುವ ಮಂಜಾ ಎಂಬಾತನೇ ಈ ಗಲಾಟೆಯ ಕೇಂದ್ರಬಿಂದುವಾಗಿದ್ದಾನೆ ಎನ್ನಲಾಗಿದೆ. ಮೌರ್ಯ ಬಾರ್‌ನಲ್ಲಿ ಮದ್ಯಪಾನ ಮಾಡಿದ್ದ ಮಂಜಾ, ಕುಡಿದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ಬಾರ್ ಆವರಣದಲ್ಲಿ ಗಲಾಟೆ ಆರಂಭಿಸಿದ್ದಾನೆ. ಆತನ ವರ್ತನೆಯಿಂದ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾನಸ್ಟೇಬಲ್‌ಗಳಾದ ನಂದೀಶ್ ಹಾಗೂ ಅಶೋಕ್ ಅವರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದಾಗ, ಮಂಜಾ ಮತ್ತಷ್ಟು ಆಕ್ರಮಣಕಾರಿ ವರ್ತನೆ ತೋರಿದ್ದಾನೆ. ಕೇವಲ ಮಾತಿನ ಚಕಮಕಿ ನಡೆಸುವುದಲ್ಲದೆ, ಇಬ್ಬರು ಕಾನಸ್ಟೇಬಲ್‌ಗಳ ಮೇಲೆಯೇ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರಿಗೂ ಗೂಸ!
ಕುಡಿದ ಅಮಲಿನಲ್ಲಿದ್ದ ರೌಡಿಯು ಸಾರ್ವಜನಿಕರ ಎದುರೇ ಪೊಲೀಸರ ಮೇಲೆ ಕೈ ಎತ್ತಿರುವುದು ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಪೊಲೀಸರು ಕೂಡಲೇ ಹಳಿಯಾಳ ಠಾಣೆಯ ಪಿಎಸ್‌ಐ ಬಸವರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪಿಎಸ್‌ಐ ವಾಹನದಿಂದಲೇ ವಾಪಸ್?
ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪಿಎಸ್‌ಐ ಬಸವರಾಜ್ ಅವರು ರೌಡಿಯ ಆರ್ಭಟ ಮತ್ತು ಪರಿಸ್ಥಿತಿಯನ್ನು ಗಮನಿಸಿ ವಾಹನದಿಂದ ಇಳಿಯದೆ ಅಲ್ಲಿಂದ ಹಿಂದಿರುಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಲ್ಲೆ ಪ್ರಕರಣ ದಾಖಲಾಗದೇ ಪ್ರಶ್ನೆಗಳ ಮಳೆ
ಘಟನೆಯ ನಂತರ ಇಂದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕೇವಲ ಬಾರ್‌ನಲ್ಲಿ ಗಲಾಟೆ ನಡೆಸಿದ ಸಂಬಂಧ ಪಿಟಿ ಕೇಸ್ ದಾಖಲಿಸಲಾಗಿದೆ ಎನ್ನಲಾಗಿದೆ. ಇದರಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕರ ಎದುರೇ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದರೆ, ಸಾಮಾನ್ಯ ನಾಗರಿಕರ ಭದ್ರತೆ ಯಾವ ಮಟ್ಟದಲ್ಲಿದೆ? ರೌಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆಯೇ? ಎಂಬ ಚರ್ಚೆ ಹಳಿಯಾಳ ಪಟ್ಟಣದಲ್ಲಿ ಜೋರಾಗಿದೆ.
ಸಾರ್ವಜನಿಕರಲ್ಲಿ ಆತಂಕ
ಒಬ್ಬ ಪುಡಿರೌಡಿ ಕುಡಿದ ಮತ್ತಿನಲ್ಲಿ ಪೊಲೀಸರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಿದ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು ಹಾಗೂ ನಿಜಾಂಶ ಹೊರಬರಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



