ಕಾಲೇಜು ಫೀಸ್ ಕಟ್ಟಲಾಗದ ಚಿಂತೆ: ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ
ಆಪ್ತ ನ್ಯೂಸ್ ಭಟ್ಕಳ:
ತಾಲೂಕಿನ ಬೆಲ್ಕೆ ಗ್ರಾಮದ ಕಂಚಿಕೇರಿಯಲ್ಲಿ ಕರುಳು ಹಿಂಡುವ ದುರಂತವೊಂದು ಸಂಭವಿಸಿದೆ. ಗುರುವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ 19 ವರ್ಷದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಮನೆಯ ಸಮೀಪದ ಬಾವಿಯಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಕಾಲೇಜು ಶುಲ್ಕದ ವಿಚಾರವಾಗಿ ಉಂಟಾದ ಮಾನಸಿಕ ಒತ್ತಡವೇ ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಶಂಕಿಸಲಾಗಿದೆ.
ಘಟನೆಯ ವಿವರ
ಮೃತ ದುರ್ದೈವಿಯನ್ನು ಗಾಯತ್ರಿ ನಾಗರಾಜ ನಾಯ್ಕ (19) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಳು. ಗುರುವಾರ ದಿಢೀರನೆ ಕಾಣೆಯಾಗಿದ್ದ ಗಾಯತ್ರಿಗಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರು ಊರೆಲ್ಲಾ ವ್ಯಾಪಕ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಆಕೆಯ ಸುಳಿವು ಸಿಗದಿದ್ದಾಗ ಭಟ್ಕಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಆಕೆಯ ಮನೆಯ ಪಕ್ಕದ ಬಾವಿಯಲ್ಲೇ ಮೃತದೇಹ ಪತ್ತೆಯಾಗಿದ್ದು, ಮಗಳ ಮೃತದೇಹ ಕಂಡು ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಮೃತಳ ತಂದೆ ನಾಗರಾಜ ನಾಯ್ಕ ಅವರು ನೀಡಿರುವ ದೂರಿನ ಪ್ರಕಾರ, ಗಾಯತ್ರಿಯು ತನ್ನ ಕಾಲೇಜು ಶುಲ್ಕ ಪಾವತಿಸಲು ಹಣವನ್ನು ಕೂಡಿಟ್ಟಿದ್ದಳು. ಆದರೆ, ಆಕೆಯ ಪರಿಚಯಸ್ಥ ಯುವಕನೊಬ್ಬ ಆ ಹಣವನ್ನು ಸಾಲವಾಗಿ ಪಡೆದು, ಮರಳಿ ನೀಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ.
ಇನ್ನೊಂದೆಡೆ, ಫೀಸ್ ಪಾವತಿಸದ ಕಾರಣಕ್ಕೆ ಕಾಲೇಜಿನ ಪ್ರಾಂಶುಪಾಲರು ಪರೀಕ್ಷೆಯ 'ಹಾಲ್ ಟಿಕೆಟ್' ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ನಂಬಿ ಹಣ ನೀಡಿದವನು ಕೈಕೊಟ್ಟಿದ್ದರಿಂದ ಹಾಗೂ ಕಾಲೇಜಿನಲ್ಲಿ ಹಾಲ್ ಟಿಕೆಟ್ ಸಿಗುವುದಿಲ್ಲ ಎಂಬ ಭೀತಿಯಿಂದ ಗಾಯತ್ರಿ ತೀವ್ರವಾಗಿ ಮಾನಸಿಕವಾಗಿ ನೊಂದಿದ್ದಳು. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಭಟ್ಕಳ ಗ್ರಾಮೀಣ ಪೊಲೀಸರು, ಸ್ಥಳ ಮಹಜರು ನಡೆಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ, ಹಣ ಪಡೆದಿದ್ದ ಯುವಕ ಹಾಗೂ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



