ಗ್ರಾಮೀಣ ಪ್ರತಿಭೆಯ ಅದ್ಭುತ ಸಾಧನೆ: ಧಾರವಾಡದ ಎಸ್‌ಡಿಎಂ ವಿದ್ಯಾರ್ಥಿನಿ ಡಾ. ರಶ್ಮಿ ಭಟ್ಟಗೆ 6 ಚಿನ್ನದ ಪದಕಗಳ ಗರಿ

Jun 8, 2026 - 18:10
 0  198
ಗ್ರಾಮೀಣ ಪ್ರತಿಭೆಯ ಅದ್ಭುತ ಸಾಧನೆ: ಧಾರವಾಡದ ಎಸ್‌ಡಿಎಂ ವಿದ್ಯಾರ್ಥಿನಿ ಡಾ. ರಶ್ಮಿ ಭಟ್ಟಗೆ 6 ಚಿನ್ನದ ಪದಕಗಳ ಗರಿ

ಆಪ್ತ ನ್ಯೂಸ್ ಶಿರಸಿ:

ಗ್ರಾಮೀಣ ಭಾಗದ ಪ್ರತಿಭೆಯೊಂದು ತನ್ನ ಪರಿಶ್ರಮ, ಶಿಸ್ತು ಮತ್ತು ಶೈಕ್ಷಣಿಕ ಮೇಲುಗೈ ಮೂಲಕ ರಾಜ್ಯ ಮಟ್ಟದಲ್ಲಿ ಹೆಮ್ಮೆಯ ಸಾಧನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೇಡಸಗಾಂವ್ ಹೊಸ್ತೋಟದ ಡಾ. ರಶ್ಮಿ ಭಟ್ಟ ಅವರು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ವಿಶ್ವವಿದ್ಯಾಲಯದ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (ಬಿ.ಪಿ.ಟಿ.) ಪದವಿಯಲ್ಲಿ ಅಪೂರ್ವ ಸಾಧನೆ ಮೆರೆದು ಒಟ್ಟು 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಎಸ್‌ಡಿಎಂ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ರಶ್ಮಿ ಭಟ್ಟ ಅವರ ಸಾಧನೆಯನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅವರ ಸಾಧನೆಯನ್ನು ಉಲ್ಲೇಖಿಸುತ್ತಾ, ವಿಶ್ವವಿದ್ಯಾಲಯದ ಅಧಿಕಾರಿಗಳು ಅವರನ್ನು “ನಿಜಕ್ಕೂ ಗಮನಾರ್ಹ ವಿದ್ಯಾರ್ಥಿನಿ” ಎಂದು ಬಣ್ಣಿಸಿದರು.

ನಾಲ್ಕೂ ವರ್ಷ ಟಾಪರ್

ಶೋಭಾ ಭಟ್ಟ ಮತ್ತು ಗಣೇಶ ಭಟ್ಟ ದಂಪತಿಯ ಪುತ್ರಿಯಾಗಿರುವ ಡಾ. ರಶ್ಮಿ ಭಟ್ಟ ಅವರು ತಮ್ಮ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಬಿ.ಪಿ.ಟಿ. ಕೋರ್ಸ್‌ನ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ವರ್ಷದ ಅಧ್ಯಯನದಲ್ಲಿಯೂ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪ್ರತಿ ವರ್ಷವೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ಅವರು, ತಮ್ಮ ನಿರಂತರ ಶ್ರಮ ಮತ್ತು ಪ್ರತಿಭೆಗೆ ಮತ್ತೊಂದು ಮೆರಗು ನೀಡಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗಳೂ ಮಡಿಲಿಗೆ

ವಾರ್ಷಿಕ ಶೈಕ್ಷಣಿಕ ಸಾಧನೆಗೆ ದೊರೆತ ನಾಲ್ಕು ಚಿನ್ನದ ಪದಕಗಳ ಜೊತೆಗೆ, ‘ಬೆಸ್ಟ್ ಮೆರಿಟೋರಿಯಸ್ ಬ್ರ್ಯಾಂಚ್ ಆಫ್ ಫಿಸಿಯೋಥೆರಪಿ’ ವಿಭಾಗದ ಚಿನ್ನದ ಪದಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಸುಪ್ರಿಯಾ ಮತ್ತು ಶ್ರೀ ಡಿ. ಹರ್ಷೇಂದ್ರ ಕುಮಾರ್ ಪ್ರಾಯೋಜಿತ ‘ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್ – ಫಿಸಿಯೋಥೆರಪಿ’ ಪ್ರಶಸ್ತಿಯ ಚಿನ್ನದ ಪದಕವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಈ ಮೂಲಕ ಒಟ್ಟು ಆರು ಚಿನ್ನದ ಪದಕಗಳನ್ನು ಗೆದ್ದು ಅವರು ವಿಶ್ವವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿನಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಪದವಿ ಪ್ರದಾನ ಸಮಾರಂಭದಲ್ಲಿ ವಿಶೇಷ ಪ್ರಶಂಸೆ

ಪದವಿ ಪ್ರದಾನ ಸಮಾರಂಭದಲ್ಲಿ ಅವರ ಸಾಧನೆಯನ್ನು ಘೋಷಿಸುವ ವೇಳೆ, “ಡಾ. ರಶ್ಮಿ ಭಟ್ಟ ಅವರು ತಮ್ಮ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ನಿರಂತರವಾಗಿ ಉತ್ಕೃಷ್ಟತೆ ಮೆರೆದಿದ್ದಾರೆ. ನಾಲ್ಕು ವರ್ಷಗಳಲ್ಲಿಯೂ ಕಾಲೇಜಿನ ಟಾಪರ್ ಆಗಿದ್ದು, ಪ್ರತಿಷ್ಠಿತ ‘ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ” ಎಂದು ಪ್ರಶಂಸಿಸಲಾಯಿತು.

ಅವರ ಹೆಸರನ್ನು ಘೋಷಿಸಿದ ವೇಳೆ ಸಭಾಂಗಣದಲ್ಲಿ ಕರತಾಡನದ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.

ಉತ್ತರ ಕನ್ನಡಕ್ಕೆ ಕೀರ್ತಿ

ಗ್ರಾಮೀಣ ಹಿನ್ನೆಲೆಯಿಂದ ಬಂದು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಈ ಮಟ್ಟದ ಸಾಧನೆ ಮಾಡಿರುವ ಡಾ. ರಶ್ಮಿ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರ ಪರಿಶ್ರಮ, ಗುರಿ ಸಾಧಿಸುವ ಛಲ ಮತ್ತು ನಿರಂತರ ಅಧ್ಯಯನ ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ.

ಡಾ. ರಶ್ಮಿ ಅವರ ಈ ಸಾಧನೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶಿಕ್ಷಣ ತಜ್ಞರು, ಗಣ್ಯರು ಹಾಗೂ ಸಾರ್ವಜನಿಕರು ಹಾರೈಸಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಊರಿನ ಜನರು ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0