ಕಾರವಾರದಲ್ಲಿ ಸರಣಿ ದೇವಸ್ಥಾನ ಕಳ್ಳತನಕ್ಕೆ ಬ್ರೇಕ್: 24 ಗಂಟೆಯಲ್ಲೇ ಡ್ಯಾಶಿಂಗ್ ಕಾರ್ಯಾಚರಣೆ ನಡೆಸಿದ ಪೊಲೀಸರು, 174 ಕೆಜಿ ಪೂಜಾ ಸಾಮಗ್ರಿ ವಶ
ಆಪ್ತ ನ್ಯೂಸ್ ಕಾರವಾರ:
ಕಳೆದ ಕೆಲ ದಿನಗಳಿಂದ ಕಾರವಾರ ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ಕಾರವಾರ ಪೊಲೀಸರು ಕೊನೆಗೂ ತೆರೆ ಎಳೆದಿದ್ದಾರೆ. ಕೇವಲ 24 ಗಂಟೆಗಳಲ್ಲೇ ಕಾರ್ಯಾಚರಣೆ ನಡೆಸಿ ದೇವಸ್ಥಾನಗಳಲ್ಲಿನ ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಸುಮಾರು ₹87 ಸಾವಿರ ಮೌಲ್ಯದ 174 ಕೆಜಿ ತೂಕದ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಾರವಾರದ ಗಿಂಡಿವಾಡ ಬಾಡ ನಿವಾಸಿ ವಿನಯ ಅಲಿಯಾಸ್ ವಿನಾಯಕ ದಯಾನಂದ ಗಾಂವಕರ್ (40) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತನೇ ಕಳೆದ ಕೆಲವು ದಿನಗಳಿಂದ ವಿವಿಧ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
7 ದಿನಗಳಲ್ಲಿ 6 ದೇವಸ್ಥಾನಗಳಲ್ಲಿ ಕಳ್ಳತನ!
ಕಾರವಾರ ತಾಲ್ಲೂಕಿನಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ ಆರು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿತ್ತು. ಆದರೆ ದೇವಸ್ಥಾನಗಳಲ್ಲಿ ಹಣಕ್ಕಿಂತ ಹೆಚ್ಚಾಗಿ ಪೂಜಾ ಕಾರ್ಯಗಳಿಗೆ ಬಳಸುವ ಹಿತ್ತಾಳೆ ಹಾಗೂ ತಾಮ್ರದ ವಸ್ತುಗಳೇ ಕಳುವಾಗುತ್ತಿದ್ದರಿಂದ ಹಾಗೂ ಅವುಗಳ ಮೌಲ್ಯ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಆರಂಭದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ.
ಆದರೆ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಕೊನೆಗೂ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ದಾಸಮಾರುತಿ ದೇವಸ್ಥಾನದಿಂದ 50 ಕೆಜಿ ವಸ್ತು ಕಳ್ಳತನ
ಜೂನ್ 6ರಂದು ಕಾರವಾರದ ಗ್ರೀನ್ ಸ್ಟ್ರೀಟ್ ನಿವಾಸಿ ಶಾಮಸುಂದರ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 20ರಂದು ಬೆಳಗ್ಗೆ 8.30ರಿಂದ ಸಂಜೆ 5.30ರ ನಡುವಿನ ಅವಧಿಯಲ್ಲಿ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಸ್ಥಾನದಲ್ಲಿ ಇಟ್ಟಿದ್ದ ಸುಮಾರು 50 ಕೆಜಿ ತೂಕದ ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರಿನ ಆಧಾರದ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 50/2026ರ ಅಡಿಯಲ್ಲಿ ಬಿಎನ್‌ಎಸ್-2023ರ ಕಲಂ 305(ಡಿ) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಸಿಸಿಟಿವಿ ಮತ್ತು ಖಚಿತ ಮಾಹಿತಿ ಪೊಲೀಸರಿಗೆ ನೆರವು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಕಾರವಾರ ಉಪವಿಭಾಗದ ಡಿವೈಎಸ್‌ಪಿ ಗಿರೀಶ್ ವಿ. ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಗೊಂಡಿತು.
ಕಾರವಾರ ನಗರ ಠಾಣೆಯ ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ ನೇತೃತ್ವದಲ್ಲಿ ಉಪನಿರೀಕ್ಷಕ ಉದ್ದಪ್ಪ ಧರೆಪ್ಪನವರ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಯಿತು. ಶಹರದಲ್ಲಿನ ವಿವಿಧ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಖಚಿತ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಿದರು.
ಕೊನೆಗೆ ಕಾರ್ಯಾಚರಣೆ ನಡೆಸಿ ವಿನಾಯಕ ಗಾಂವಕರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
174 ಕೆಜಿ ಪೂಜಾ ಸಾಮಗ್ರಿ ವಶ
ಬಂಧಿತ ಆರೋಪಿಯಿಂದ ದೇವಸ್ಥಾನಗಳ ಪೂಜಾ ಕಾರ್ಯಗಳಿಗೆ ಬಳಸಲಾಗುತ್ತಿದ್ದ ಹಿತ್ತಾಳೆ ಹಾಗೂ ತಾಮ್ರದ ವಸ್ತುಗಳಾದ ಘಂಟೆಗಳು, ದೀಪದ ಸಮೆಗಳು, ಆರತಿ ತಟ್ಟೆಗಳು ಸೇರಿದಂತೆ ಒಟ್ಟು 174 ಕೆಜಿ ತೂಕದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು ₹87,000 ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ಕಳ್ಳತನ ಪ್ರಕರಣಗಳ ಸುಳಿವು
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯು ಕಾರವಾರ ನಗರ, ಕಾರವಾರ ಗ್ರಾಮೀಣ ಹಾಗೂ ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಇನ್ನೂ ಹಲವು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ
ಸರಣಿ ದೇವಸ್ಥಾನ ಕಳ್ಳತನಗಳಿಂದ ಆತಂಕಗೊಂಡಿದ್ದ ಸಾರ್ವಜನಿಕರು ಹಾಗೂ ದೇವಸ್ಥಾನಗಳ ಆಡಳಿತ ಮಂಡಳಿಗಳು ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡ ಕಾರವಾರ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿಎಸ್ಐ ಉದ್ದಪ್ಪ ಧರೆಪ್ಪನವರ, ಸಿಎಚ್‌ಸಿ ಸೂರಜ್ ಕೊಠಾರಕರ, ಸಚಿನ್ ನಾಯ್ಕ, ಹಸನ್ ಕುಟ್ಟಿ, ಸಿಪಿಸಿ ರಾಜೇಶ್ ನಾಯ್ಕ, ಮದೇವ ಸಂಗಾಪುರ, ಪ್ರಕಾಶ ದಂಡೆಪ್ಪನವರ, ಪ್ರತಾಪಕುಮಾರ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



