ಶಿರಸಿಯಲ್ಲಿ ಗಾಂಜಾ ಮಾರಾಟ ಜಾಲಕ್ಕೆ ಪೋಲಿಸರ ಬ್ರೇಕ್..! ಮಧ್ಯರಾತ್ರಿ ಕಾರ್ಯಾಚರಣೆಯಲ್ಲಿ ಯುವಕ ಬಂಧನ
ಆಪ್ತ ನ್ಯೂಸ್ ಶಿರಸಿ:
ನಗರದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿ, ಆತನಿಂದ ಸುಮಾರು ₹10 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ರಾಜೀವ ನಗರದ ನಿವಾಸಿ ಆನಂದ ಅಲಿಯಾಸ್ ತುರಿಮಣಿ ಹನುಮಂತಪ್ಪ ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಧ್ಯರಾತ್ರಿ ವೇಳೆ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಮೀಪ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಯು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಅಕ್ರಮವಾಗಿ ಹೊಂದಿದ್ದ ಸುಮಾರು ₹10 ಸಾವಿರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ
ಈ ಕಾರ್ಯಾಚರಣೆಯನ್ನು ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಪಿಎಸ್ಐ ಬಸವರಾಜ ಕನಕಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಂದೀಪ್ ನಿಂಬಾಯಿ, ರಾಕೇಶ್ ಎನ್.ಎಚ್., ಸಂತೋಷ್ ಆರ್.ಕೆ., ಅರುಣ್ ಲಮಾಣಿ ಹಾಗೂ ಲಕ್ಷ್ಮಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ
ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ನಾಗರಿಕರು ಕೂಡ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



