ಬೆಂಗಳೂರಿನ ವಿದ್ಯಾರ್ಥಿ ಈಗ ನೇಪಾಳದ 'ಬಾಸ್': ಯುವಶಕ್ತಿಯ ಕ್ರಾಂತಿಗೆ ನಾಂದಿ ಹಾಡಿದ ಹಿಮಾಲಯದ ರಾಷ್ಟ್ರ!

ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NMIT) ಓದಿದ ಬಾಲೆನ್‌ ಶಾ ನೇಪಾಳದ ಪ್ರಧಾನಿ

Apr 2, 2026 - 11:30
 0  76
ಬೆಂಗಳೂರಿನ ವಿದ್ಯಾರ್ಥಿ ಈಗ ನೇಪಾಳದ 'ಬಾಸ್': ಯುವಶಕ್ತಿಯ ಕ್ರಾಂತಿಗೆ ನಾಂದಿ ಹಾಡಿದ ಹಿಮಾಲಯದ ರಾಷ್ಟ್ರ!

ಆಪ್ತ ನ್ಯೂಸ್ ಕಾಠ್ಮಂಡು/ಬೆಂಗಳೂರು:

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ಜಗತ್ತಿನ ಗಮನವೆಲ್ಲಾ ಪಶ್ಚಿಮ ಏಷ್ಯಾದತ್ತ ನೆಟ್ಟಿರುವಾಗ, ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಸದ್ದಿಲ್ಲದೆ ಒಂದು ಅದ್ಭುತ ರಾಜಕೀಯ ಕ್ರಾಂತಿ ನಡೆದಿದೆ. ಹಳಬರ ಆಟಕ್ಕೆ ಇತಿಶ್ರೀ ಹಾಡಿರುವ ನೇಪಾಳದ ಜನತೆ, ದೇಶದ ಚುಕ್ಕಾಣಿಯನ್ನು ಸಂಪೂರ್ಣವಾಗಿ 'ಜೆನ್-ಝೀ' (Gen Z) ತಲೆಮಾರಿನ ಕೈಗೊಪ್ಪಿಸಿದ್ದಾರೆ. ವಿಶೇಷವೆಂದರೆ, ಈ ಹೊಸ ಕ್ರಾಂತಿಯ ಸಾರಥಿ ನೇಪಾಳದ ನೂತನ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್ ಶಾ) ಅವರಿಗೆ ನಮ್ಮ ಬೆಂಗಳೂರಿನೊಂದಿಗೆ ಅವಿನಾಭಾವ ನಂಟಿದೆ!

ಬೆಂಗಳೂರಿನಲ್ಲಿ ಅರಳಿದ ನೇಪಾಳದ ನಾಯಕತ್ವ

ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ 35 ವರ್ಷದ ಹಸಿಹಸಿ ಯುವಕ ಬಾಲೇಂದ್ರ ಶಾ ಅವರ ಶೈಕ್ಷಣಿಕ ಹಿನ್ನೆಲೆ ಕನ್ನಡಿಗರಿಗೆ ಹೆಮ್ಮೆ ತರುವಂತದ್ದು. ಇವರು ಉನ್ನತ ವ್ಯಾಸಂಗಕ್ಕಾಗಿ ಆರಿಸಿಕೊಂಡಿದ್ದು ಭಾರತದ ಸಿಲಿಕಾನ್ ಸಿಟಿ ಬೆಂಗಳೂರನ್ನು. ಇಲ್ಲಿನ ಪ್ರತಿಷ್ಠಿತ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NMIT) ಅವರು ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನ ಪರಿಸರ, ಇಲ್ಲಿನ ತಾಂತ್ರಿಕ ಬೆಳವಣಿಗೆ ಮತ್ತು ಕ್ರಿಯಾಶೀಲತೆಯನ್ನು ಹತ್ತಿರದಿಂದ ಕಂಡ ಬಾಲೆನ್, ಇಂದು ನೇಪಾಳದ ಹಣೆಬರಹ ಬದಲಿಸಲು ಸನ್ನದ್ಧರಾಗಿದ್ದಾರೆ. ಕೇವಲ ಪ್ರಧಾನಿ ಮಾತ್ರವಲ್ಲ, ಅವರ ಕ್ಯಾಬಿನೆಟ್‌ನಲ್ಲಿರುವ ಇತರ ಐವರು ಮಂತ್ರಿಗಳು ಕೂಡ ಭಾರತದಲ್ಲೇ ಶಿಕ್ಷಣ ಪಡೆದವರು ಎಂಬುದು ವಿಶೇಷ.

ರೀಲ್ಸ್ ಬಿಟ್ಟು ದೇಶ ಕಟ್ಟಲು ನಿಂತ 'ಯುವ ಪಡೆ'

ಸಾಮಾನ್ಯವಾಗಿ 30ರ ಆಸುಪಾಸಿನ ಯುವಕ-ಯುವತಿಯರು ಇನ್‌ಸ್ಟಾಗ್ರಾಮ್ ರೀಲ್ಸ್, ಕ್ರಿಕೆಟ್ ಕ್ರೇಜ್, ಪಿಝ್ಝಾ-ಬರ್ಗರ್ ಅಥವಾ ಕವಾಸಕಿ ನಿಂಜಾ, ಹಾರ್ಲೆ ಡೇವಿಡ್ಸನ್ ಬೈಕುಗಳಲ್ಲಿ ಹಿಮಾಲಯ ಸುತ್ತುತ್ತಾ ಮೋಜು ಮಸ್ತಿಯಲ್ಲಿ ಇರಬೇಕಾದವರು. ಆದರೆ ನೇಪಾಳದ ಈ ತರುಣ ತಂಡ ಭ್ರಮಾಲೋಕದಿಂದ ಹೊರಬಂದು 'ದೇಶ ಕಟ್ಟುವ' ಕಾಯಕಕ್ಕೆ ಇಳಿದಿದ್ದಾರೆ.

ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಸ್ಥಾಪನೆಯಾದ ಕೇವಲ ನಾಲ್ಕೇ ವರ್ಷಗಳಲ್ಲಿ ಇತಿಹಾಸ ನಿರ್ಮಿಸಿದೆ. ಪಾರ್ಲಿಮೆಂಟ್‌ನ ಒಟ್ಟು 275 ಸೀಟುಗಳ ಪೈಕಿ 182 ಸೀಟುಗಳನ್ನು ಗೆಲ್ಲುವ ಮೂಲಕ ಹಳೆಯ ತಲೆಮಾರಿನ ರಾಜಕಾರಣಿಗಳನ್ನು ಧೂಳೀಪಟ ಮಾಡಿದೆ.

ಅಚ್ಚರಿ ಮೂಡಿಸುವ 'ಹೈ ಪ್ರೊಫೈಲ್' ಮಂತ್ರಿಮಂಡಲ

ನೇಪಾಳದ ಹೊಸ ಮಂತ್ರಿಮಂಡಲವನ್ನು ನೋಡಿದರೆ ಯಾರಿಗಾದರೂ ಅಸೂಯೆ ಆಗುವಂತಿದೆ. ಇಲ್ಲಿ ಮಂತ್ರಿಗಳಾಗಲು ವಯಸ್ಸು ಅರ್ಹತೆಯಲ್ಲ, ಬದಲಿಗೆ ವಿದ್ವತ್ತು ಮತ್ತು ಕನಸುಗಳೇ ಮಾನದಂಡ.

ಸಚಿವರ ಹೆಸರು ಇಲಾಖೆ ವಯಸ್ಸು
ಬಾಲೇಂದ್ರ ಶಾ ಪ್ರಧಾನ ಮಂತ್ರಿ 35
ಶೋಬಿತಾ ಗೌತಮ್ ಕಾನೂನು ಮಂತ್ರಿ 30
ಸಸ್ಮಿತಾ ಪೋಖಾರೆಲ್ ಶಿಕ್ಷಣ ಮಂತ್ರಿ 29
ಪ್ರತಿಭಾ ರಾವೆಲ್ ಸಾಮಾನ್ಯ ಆಡಳಿತ 32
ಗೀತಾ ಚೌಧುರಿ ಕೃಷಿ ಸಚಿವೆ 33
ಸೀತಾ ಬಾದಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ 30
ದೀಪಕ್ ಶಾ ಕಾರ್ಮಿಕ ಮಂತ್ರಿ 34
ಸುದನ್ ಗುರುಂಗ್ ಗೃಹ ಮಂತ್ರಿ 38
ನಿಶಾ ಮೊಹಾತೋ ಆರೋಗ್ಯ ಸಚಿವ 38

ಈ ತಂಡದಲ್ಲಿರುವ ಹೆಚ್ಚಿನವರು ಮಾಸ್ಟರ್ಸ್ ಪದವಿ ಮತ್ತು ಪಿಎಚ್.ಡಿ ಪಡೆದವರು. ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ (High Academic Profile) ಹೊಂದಿರುವ ಈ ಯುವ ಪಡೆ, "This is the country, and we are the generation" ಎನ್ನುತ್ತಾ ನೂರಂಶದ ಕಾರ್ಯಕ್ರಮಗಳನ್ನು ಘೋಷಿಸಿದೆ.

ಚೀನಾ ಒಲವಿನ ಓಲಿಗೆ ಜೈಲು; ಭಾರತದತ್ತ ನವ ನೋಟ

ನೇಪಾಳದ ಈ ಹಿಂದಿನ ಪ್ರಧಾನಿ ಓಲಿ, ಕಮ್ಯುನಿಸ್ಟ್ ಸಿದ್ಧಾಂತದ ಪ್ರಭಾವದಿಂದಾಗಿ ಭಾರತದೊಂದಿಗಿನ ಸಾಂಪ್ರದಾಯಿಕ ಶಿಷ್ಟಾಚಾರ ಮುರಿದು ಚೀನಾಕ್ಕೆ ಜೈ ಎಂದಿದ್ದರು. ಚೀನಾ ಇದನ್ನು ಬಳಸಿಕೊಂಡು ನೇಪಾಳದಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು. ಆದರೆ ಈ ಹೊಸ ಯುವ ಸರಕಾರ 74 ವರ್ಷದ ಓಲಿಯನ್ನು ಜೈಲಿಗಟ್ಟುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ರವಾನಿಸಿದೆ.

ಬೆಂಗಳೂರಿನಲ್ಲಿ ಓದಿ, ಭಾರತದ ಸಂಸ್ಕೃತಿಯನ್ನು ಬಲ್ಲ ಬಾಲೆಂದ್ರ ಶಾ ನೇತೃತ್ವದ ಈ ತಂಡ, ಭಾರತದೊಂದಿಗೆ ಮತ್ತೆ ಹಳೆಯ ಸ್ನೇಹ ಸಂಬಂಧವನ್ನು ಹೇಗೆ ಗಟ್ಟಿಗೊಳಿಸಲಿದೆ ಎಂಬುದು ಈಗ ಕುತೂಹಲದ ವಿಷಯ. ಯುವ ಕನಸುಗಳು ಮತ್ತು ಆಧುನಿಕ ತಂತ್ರಜ್ಞಾನದ ಅರಿವಿರುವ ಈ ತಂಡಕ್ಕೆ ಜಗತ್ತು 'ಆಲ್ ದ ಬೆಸ್ಟ್' ಹೇಳುತ್ತಿದೆ.


What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0