ಊಟದ ವಿಚಾರಕ್ಕೆ ಹೊಟೇಲ್‌ನಲ್ಲಿ ಗಲಾಟೆ; 11 ಮಂದಿ ವಿರುದ್ಧ ಪ್ರಕರಣ ದಾಖಲು
ಆಪ್ತ ನ್ಯೂಸ್ ಅಂಕೋಲಾ:
ಪಟ್ಟಣದ ಹೃದಯಭಾಗದಲ್ಲಿರುವ ಹೋಟೆಲ್‌ವೊಂದರಲ್ಲಿ ಊಟದ ವಿಚಾರವಾಗಿ ಆರಂಭವಾದ ಸಣ್ಣ ಮಾತಿನ ಚಕಮಕಿ, ಕ್ಷಣಾರ್ಧದಲ್ಲೇ ಎರಡು ಗುಂಪುಗಳ ನಡುವಿನ ಗಲಾಟೆಯಾಗಿ ಮಾರ್ಪಟ್ಟು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಟ್ಟು 11 ಮಂದಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಪಟ್ಟಣದ ಗುಡಗಾರ ಗಲ್ಲಿಯಲ್ಲಿರುವ ಸುದರ್ಶನ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನಲ್ಲಿ ಊಟಕ್ಕೆ ಸಂಬಂಧಿಸಿದ ವಿಷಯವೊಂದರ ಬಗ್ಗೆ ಆರಂಭವಾದ ವಾಗ್ವಾದವು ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದು, ಎರಡು ಗುಂಪಿನ ನಡುವೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುವುದು, ತಳ್ಳಾಟ-ನೂಕಾಟ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರಿಂದ ಹೋಟೆಲ್‌ನಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ ತಕ್ಷಣ ಮಧ್ಯಪ್ರವೇಶಿಸಿ ಜಗಳವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಎರಡೂ ಗುಂಪಿನ ಸದಸ್ಯರಿಗೆ ಶಾಂತವಾಗಿರುವಂತೆ ಸೂಚನೆ ನೀಡಿದರೂ, ಆರೋಪಿಗಳು ಪೊಲೀಸರ ಸೂಚನೆಯನ್ನು ಲೆಕ್ಕಿಸದೇ ತಮ್ಮ ಉದ್ಧಟ ವರ್ತನೆ ಮುಂದುವರಿಸಿದ್ದರಿಂದ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಒಂದು ಗುಂಪಿನ ನಿರಂಜನ ಹರಿಕಂತ್ರ (ಕಣಗಿಲ್), ಮನೋಜ್‌ಕುಮಾರ್ ಖಾರ್ವಿ (ಉಪ್ಪುಂದ), ಕಿಶೋರ ಮೊಗವೀರ (ಉಪ್ಪುಂದ), ಸೂರಜ ಹೊಸಕಟ್ಟಾ (ಗೋಕರ್ಣ), ದೀಪಕ ಹರಿಕಂತ್ರ (ಕಣಗಿಲ್) ಹಾಗೂ ರಂಜನ ಗೋವಿಂದ ಹರಿಕಂತ್ರ (ಕಣಗಿಲ್) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಗುಂಪಿನ ಪ್ರಶಾಂತ ನಾಯಕ (ಅಂಕೋಲಾ), ಗಣಪತಿ ನಾಯಕ (ಅಂಕೋಲಾ), ರಾಘವೇಂದ್ರ ಅಂಬಿಗ (ಬೇಲೆಹಿತ್ತಲ), ನಾರಾಯಣ ಗುನಗಾ (ಸೂರ್ವೆ) ಹಾಗೂ ಸದಾನಂದ ನಾಯ್ಕ (ಅಂಕೋಲಾ) ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಅಂಕೋಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕ್ಷುಲ್ಲಕ ವಿಚಾರದಿಂದ ಆರಂಭವಾದ ವಾಗ್ವಾದವೇ ಅನಗತ್ಯ ಗಲಾಟೆಗೆ ಕಾರಣವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ಸಮಾಜದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



