ಸಂಸದೀಯ ಸಮಿತಿ ಸಭೆ ಬಳಿಕ ಲಡಾಕ್‌ನ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಸದ ಕಾಗೇರಿ ಭೇಟಿ
ಆಪ್ತ ನ್ಯೂಸ್ ಶಿರಸಿ:
ಲಡಾಕ್‌ನ ಲೆಹ್‌ನಲ್ಲಿ ನಡೆದ ಸಂಸದೀಯ ಸಮಿತಿ ಸಭೆಯ ಬಳಿಕ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮಿತಿಯ ಇತರ ಸದಸ್ಯರೊಂದಿಗೆ ಅಲ್ಲಿನ ಪ್ರಮುಖ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಹೇಮಿಸ್ ಬೌದ್ಧ ಮಠ, ಲಡಾಕ್‌ನ ರಾಜಮನೆತನದ ವೈಭವವನ್ನು ಪ್ರತಿಬಿಂಬಿಸುವ ಶೇ ಅರಮನೆ, ಸಮುದ್ರ ಮಟ್ಟದಿಂದ ಸುಮಾರು 17,688 ಅಡಿ ಎತ್ತರದಲ್ಲಿರುವ ವಿಶ್ವದ ಅತ್ಯುನ್ನತ ವಾಹನ ಸಂಚಾರ ರಸ್ತೆಗಳಲ್ಲಿ ಒಂದಾದ 'ಚಾಂಗ್ ಲಾ ಪಾಸ್', ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ಯಾಂಗೊಂಗ್ ಸರೋವರ ಹಾಗೂ ಪ್ರತಿವರ್ಷ ಜೂನ್ ತಿಂಗಳಲ್ಲಿ ನಡೆಯುವ ಪ್ರಸಿದ್ಧ ಸಿಂಧೂ ದರ್ಶನ ಉತ್ಸವಕ್ಕೆ ಸಾಕ್ಷಿಯಾಗುವ ಪವಿತ್ರ ಸಿಂಧೂ ಘಾಟ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಅವರು ವೀಕ್ಷಿಸಿದರು.
ಭೇಟಿಯ ವೇಳೆ ಲಡಾಕ್‌ನ ಅನನ್ಯ ನೈಸರ್ಗಿಕ ಸೌಂದರ್ಯ, ಬೌದ್ಧ ಸಂಸ್ಕೃತಿಯ ಶ್ರೀಮಂತಿಕೆ, ಐತಿಹಾಸಿಕ ಪರಂಪರೆ ಹಾಗೂ ಗಡಿ ಪ್ರದೇಶದ ವಿಶೇಷತೆಗಳನ್ನು ಕಾಗೇರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅವರು, "ಭಾರತದ ಈ ಗಡಿ ಭಾಗದ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ನಿಜಕ್ಕೂ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ಲಡಾಕ್ ದೇಶದ ಹೆಮ್ಮೆಯ ಪ್ರವಾಸಿ ತಾಣವಾಗಿದ್ದು, ಇಲ್ಲಿನ ಪರಂಪರೆ ಮತ್ತು ಪ್ರಕೃತಿ ವೈಭವ ಪ್ರತಿಯೊಬ್ಬ ಭಾರತೀಯನೂ ಒಮ್ಮೆ ಅನುಭವಿಸಬೇಕಾದದ್ದು," ಎಂದು ಅಭಿಪ್ರಾಯಪಟ್ಟರು.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



