ಆಗಸ್ಟ್ 1ರೊಳಗೆ ಆಸ್ಪತ್ರೆ ಕುರಿತು ಉತ್ತರ ನೀಡದಿದ್ದರೆ ಪಾದಯಾತ್ರೆ, ಧರಣಿ: ಅನಂತಮೂರ್ತಿ 

Jul 15, 2026 - 11:17
 0  22
ಆಗಸ್ಟ್ 1ರೊಳಗೆ ಆಸ್ಪತ್ರೆ ಕುರಿತು ಉತ್ತರ ನೀಡದಿದ್ದರೆ ಪಾದಯಾತ್ರೆ, ಧರಣಿ: ಅನಂತಮೂರ್ತಿ 

ಆಪ್ತ ನ್ಯೂಸ್ ಶಿರಸಿ:

ಇಲ್ಲಿನ ಸರ್ಕಾರಿ ಆಸ್ಪತ್ರೆ ಅಭಿವೃದ್ದಿ ಕುರಿತು ಕೇಳಿದ್ದ ಏಳು ಪ್ರಶ್ನೆಗಳಿಗೆ ಇದುವರೆಗೂ ಶಾಸಕರು ಹಾಗೂ ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಆಸ್ಪತ್ರೆಯನ್ನು ಮೂಲ ಸ್ವರೂಪದಲ್ಲಿಯೇ ಕಾರ್ಯಾರಂಭಗೊಳಿಸದೆ ಹಾಳು ಮಾಡಲಾಗುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.
ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಛೇರಿ ದೀನದಯಾಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ, ಆಸ್ಪತ್ರೆ ಕುರಿತು ಏಳು ಪ್ರಶ್ನೆಗಳನ್ನು ಕೇಳಿ ತಿಂಗಳಾದರೂ ಉತ್ತರ ಸಿಕ್ಕಿಲ್ಲ. ಈ ಮೌನವೇ ಸಮ್ಮತಿಯ ಲಕ್ಷಣವಾಗಿದೆ. ಆಸ್ಪತ್ರೆಯ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು ಎಂದರು.
ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲೂ ಆಸ್ಪತ್ರೆಯ ಸಮಸ್ಯೆಗಳ ಕುರಿತು ಶಾಸಕರು ಗಮನಕ್ಕೆ ತಂದಿಲ್ಲ‌ ಎಂದು ಆರೋಪಿಸಿದ ಅವರು, "ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ವೈದ್ಯಕೀಯ ಯಂತ್ರೋಪಕರಣಗಳ ಖರೀದಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎನ್ನುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶಾಸಕರಿಗೆ ಆಡಳಿತ ನಡೆಸಲು ಬಾರದು ಎಂಬ ಮಾತು ಜನರಿಂದ ಕೇಳಿಬರುತ್ತಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇರಬೇಕಾದ ಶಾಸಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಸಚಿವರು ಶಿರಸಿಗೆ ಬಂದು ಭರವಸೆ ನೀಡಿ ಹೋಗುತ್ತಿದ್ದಾರೆ. ಆದರೆ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಆಸ್ಪತ್ರೆಗೆ ಆರಂಭದಲ್ಲಿ ಸುಮಾರು 30 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣಗಳ ಯೋಜನೆ ಇದ್ದು, ಅದು ಈಗ 5.20 ಕೋಟಿಗೆ ಸೀಮಿತಗೊಂಡಿದೆ.  ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಯಂತ್ರಗಳ ಪಟ್ಟಿಯಲ್ಲಿ ಇಲ್ಲ. ಆದ್ಯತಾ ಪಟ್ಟಿಯಲ್ಲಿ ಇದೆ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಶೀಘ್ರವೇ ಎಲ್ಲಾ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಹಾವು ಕಚ್ಚಿ ಮೃತಪಟ್ಟ ಬಾಲಕನ ಪ್ರಕರಣವನ್ನು ಉಲ್ಲೇಖಿಸಿದ ಅವರು, ಮಗನಿಗೆ ಹಾವು ಕಚ್ಚಿದೆ ಎಂದು ಪೋಷಕರು ಆಸ್ಪತ್ರೆಯಲ್ಲಿ ಮನವಿ ಮಾಡಿದರೂ ಅಗತ್ಯ ಕಾಳಜಿ ವಹಿಸಲಿಲ್ಲ ಎಂಬ ಆರೋಪ ಇದೆ. ಇಂತಹ ಪ್ರಕರಣಗಳ ಬಗ್ಗೆ ಶಾಸಕರು ಸ್ವತಃ ಪರಿಶೀಲನೆ ನಡೆಸಬೇಕಿತ್ತು. ಆಸ್ಪತ್ರೆಯ ವಿಚಾರದಲ್ಲಿ ಜನಪ್ರತಿನಿಧಿಗಳ ಕಲ್ಲುಹೃದಯ ಕರಗುತ್ತಿಲ್ಲ. ಅಗತ್ಯ ವೈದ್ಯರ ನೇಮಕಾತಿಯನ್ನೂ ಕೂಡಲೇ ಮಾಡಬೇಕು ಎಂದು ಹೇಳಿದರು.
ಶಿರಸಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ವಿಶೇಷ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಬೇಕು. ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಟ್ರಾಮಾ ಸೆಂಟರ್ ಆಗಿ ಅಭಿವೃದ್ಧಿಪಡಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಗಸ್ಟ್ 1ರೊಳಗೆ ಆಸ್ಪತ್ರೆ ಅಭಿವೃದ್ಧಿ ಕುರಿತು ಸ್ಪಷ್ಟ ಉತ್ತರ ನೀಡದಿದ್ದರೆ ಹಾಗೂ ಅಗತ್ಯ ಪ್ರಕ್ರಿಯೆ ಆರಂಭಿಸದಿದ್ದರೆ ಪಾದಯಾತ್ರೆ, ಧರಣಿ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು. ಹಳ್ಳಿಹಳ್ಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೇವಲ ಭರವಸೆಗಳನ್ನು ನೀಡುತ್ತಿದೆ. ಸರ್ಕಾರ ಗಂಟಲಮಟ್ಟದ ಮಾತುಗಳನ್ನಷ್ಟೇ ಆಡುತ್ತಿದೆ. ಗ್ಯಾರಂಟಿ ಯೋಜನೆಗಳೂ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿವೆ. ಜನರ ಆರೋಗ್ಯಕ್ಕೆ ಸಂಬಂಧಿಸಿದ ಆಸ್ಪತ್ರೆಯಂತಹ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಸುರೇಶ್ ನಾಯ್ಕ ಕಾನಗೋಡ, ಶಿರಸಿ ಮಾತನಾಡಿ, ಶಾಸಕರೇ ಲಿಕ್ಕರ್ ಮಾರುವುದರಿಂದ ಹೆಂಡದ ಹಾವಳಿ ಜಾಸ್ತಿ ಆಗಿದೆ,
ಬದಲಾವಣೆಗೆ ಆಗಮಿಸಿದ ಶಾಸಕರು ಏನು ಬದಲಾವಣೆ ತಂದಿದ್ದಾರೆ ಕೇಳುವಂತಾಗಿದೆ. ಹಳ್ಳಿ‌ಹಳ್ಳಿಯಲ್ಲಿ ಲಿಕ್ಕರ್ ಗಾಂಜಾ ಹಾವಳಿಯಾಗಿದೆ, ಎಂದರು, 

ನಾರಾಯಣ ಹೆಗಡೆ ಮತ್ತಿಗಟ್ಟ ಮಾತನಾಡಿ ಈ ಕಾಂಗ್ರೆಸ್ ಸರ್ಕಾರ ಬಹು ಅಂಗಾಂಗ ವೈಫಲ್ಯದ ರೀತಿಯಲ್ಲಿ ಅಧಿಕಾರ ನಡೆಸುತ್ತಿದೆ ಸರ್ಕಾರದ ಆಡಳಿತ ವ್ಯವಸ್ಥೆ ಯಕ್ಕುಟ್ಟು ಹೋಗಿದೆ ಎಂದರು.

ಪ್ರಮುಖರಾದ ರವಿ ಗಾಂವ್ಕರ್,  ಹಾಗೂ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.


****

ಶಾಸಕರಿಗೆ ಕೇಳಲಾದ ಪ್ರಶ್ನೆಗಳು....

1) 5 ವರ್ಷದ ಹಿಂದೆ ಸನ್ಮಾನ್ಯ ಕಾಗೇರಿ ಅವರು ಮೇಲ್ದರ್ಜೆಗೇರಿಸಿ ಕೆಲಸ ಪ್ರಾರಂಭಿಸಿದ ಆಸ್ಪತ್ರೆಗೆ ಕಾಟಾಚಾರಕ್ಕೆ ದಿನೇಶ್ ಗುಂಡೂರಾವ್ ಅವರಿಗೆ ಯುಟಿ ಖಾದರ್ ಅವರಿಗೆ ಮನವಿ ಕೊಡುವುದರ ಹಿಂದಿನ ರಾಜಕೀಯ ಮರ್ಮ ವೇನು? ನಾಟಕವೇ?

2) ಆಸ್ಪತ್ರೆ ಕೆಲಸಕ್ಕೆ ಬರುವುದಾದರೆ ನಾನು ಮನೆಗೆ ಹೋಗಿ ವೈದ್ಯರನ್ನು ಕರೆದುಕೊಂಡು ಬರುತ್ತೇನೆ ಹೇಳುತ್ತೀರಿ,ಮನೆಗೆ ಕರೆದು ಕೊಂಡು ಬರಲು ಅವರು ತೋಟದ ಕೆಲಸಕ್ಕೆ ಬರುವ ಆಳುಗಳ?
ನಿಮಗೆ ವೈದ್ಯರನ್ನು ನೇಮಕ ಮಾಡಿಕೊಳ್ಳುವ, ಅವರಿಗೆ ಕೆಲಸ ಮಾಡಲು ಪೂರಕ ವಾತಾವರಣ ಕಲ್ಪಿಸಿ ಕೊಡುವ ಆಡಳಿತ ವಿಧಾನವೇ ಗೊತ್ತಿಲ್ಲ ಎಂದು ಕಾಣುತ್ತದೆ ನಿಮ್ಮ ಉತ್ತರ?

3) ನ.13, 2020 ರಂದು ಕಾರ್ಡಿಯೋಲಾಜಿ, ನ್ಯೂರೊಲೊಜಿ, ನೆಪ್ರೋಲೋಜಿ ಸೇರಿದಂತೆ ಹಲವಾರು ಸೂಪರ್ ಸ್ಪೆಷಾಲಿಟಿ ಹೊಂದಿರುವ ಆಸ್ಪತ್ರೆ ಅನುಮೋದನೆಯಾಗಿದ್ದು, ರೂ.112 ಕೋಟಿ ಕಟ್ಟಡಕ್ಕೆ, ರೂ.30 ಕೋಟಿ ಸಾಮಗ್ರಿಗಳಿಗೆ ಮೀಸಲಿಡಲಾಗಿತ್ತು, ಕಟ್ಟಡ ಕೆಲಸ 80% ಮುಗಿದ ಕೂಡಲೇ ವೈದ್ಯರ, ಸಿಬ್ಬಂದಿ ನೇಮಕಾತಿ ಮತ್ತು ಯತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕು ಎಂದು ಆದೇಶದಲ್ಲಿದೆ, 80 % ಕೆಲಸ ಮುಗಿದು ಒಂದು ವರ್ಷವಾದರೂ ಇನ್ನೂ ಯಾಕೆ ಟೆಂಡರ್ ಕರೆದಿಲ್ಲ ? ವೈದ್ಯರ ನೇಮಕಾತಿ ಆಗಿಲ್ಲ ? ಬಡವರ ಆಸ್ಪತ್ರೆ ಯನ್ನು ಹಾಳು ಮಾಡುವುದು ನಿಮ್ಮ ಅಜೆಂಡಾ ಆಗಿದೆಯೇ?

 4)ಮೇಲ್ದರ್ಜೆಗೇರಿರುವ ಸೂಪರ್ ಸ್ಪೆಷಾಲಿಟಿಗೆ ಸಮವಾದ ಆಸ್ಪತ್ರೆಗೆ ರೂ. 30 ಕೋಟಿ ಸಲಕರಣೆ ಬದಲಿಗೆ 5.20 ಕೋಟಿ ರೂಪಾಯಿಗೆ ಇಳಿಸಿದ್ದೀರಿ ಇದಕ್ಕೆ ಕಾರಣವೇನು ?  ದಾಖಲೆ ಕೊಟ್ಟಿದ್ದೇವೆ 


5) ಬಡವರಿಗಾಗಿ ಉಚಿತವಾಗಿ ಸಿಗುತ್ತಿದ್ದ 15 ಕೋಟಿ ರೂಪಾಯಿಯ MRI ಮತ್ತು 2 ಕೋಟಿ ಮೌಲ್ಯದ CITI ಸ್ಕ್ಯಾನ್ ಮಷಿನ್ ಸಹಿತ ಹಲವಾರು ಪರಿಕರಗಳನ್ನು ಯಾಕೆ ಮಾಯ ಮಾಡಿದ್ದೀರಿ ? ಧಾಖಲೆ ಕೊಟ್ಟಿದ್ದೇವೆ 

 6) ಹಿಂದಿದ್ದ 100 ಹಾಸಿಗೆಯಿಂದ 250 ಹಾಸಿಗೆ ಆಸ್ಪತ್ರೆಗೆ ಬೇಕಾಗಿದ್ದ ಸಿಬ್ಬಂದಿ 197, ಈಗಿರುವ ಸಿಬ್ಬಂದಿ 90, ಹೆಚ್ಚುವರಿಯಾಗಿ ಬೇಕಾಗಿದ್ದು 107, ಈಗ ಹಾಕಿಸಿದ್ದು 37, ಅದರಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಇಲ್ಲ, ನ್ಯೂರೊಲೊಜಿ, ನೆಪ್ರೋಲೋಜಿ ಇಲ್ಲ, ಆ ವಿಭಾಗಕ್ಕೆ ಬೇಕಾದ ಸಿಬ್ಬಂದಿ ಕೂಡ ಇಲ್ಲ, ಇದಕ್ಕೆ ನಿಮ್ಮ ಉತ್ತರವೇನು ?

7) ಪ್ರಸ್ತಾವನೆ ಸಲ್ಲಿಸಿ 2 ವರ್ಷದ ನಂತರ ಈಗ ನೇಮಕಾತಿ ಆಗಿರುವುದು ಜೆನರಲ್ ಸರ್ಜನ್, ಫಿಜಿಷಿಯನ್, ಅರವಳಿಕೆ ತಜ್ಞರು, ಕೀಲು ಮತ್ತು ಮೂಳೆ ತಜ್ಞರು ಇದು ಬೇಸಿಕ್ ಆಗಿರುತ್ತದೆ, ಅಂದರೆ ತಾಲೂಕು ಆಸ್ಪತ್ರೆಗೆ ನೇಮಕ ಮಾಡುವಷ್ಟು ಮಾಡಿದ್ದಾರೆ ಹೊರತು ಜಿಲ್ಲಾಸ್ಪತ್ರೆಗೆಯೋ ಅಥವಾ ಮೇಲ್ದರ್ಜ್ಗೆರಿದ ಆಸ್ಪತ್ರೆಗೆ ಅಲ್ಲ, ಅಲ್ಲಿಗೆ ಟ್ರಾಮಾ ಸೆಂಟರ್, ಕ್ಯಾತ್ ಲ್ಯಾಬ್, ನೆಪ್ರೋಲೋಜಿ ಇಲ್ಲದೇ, ತಾಲೂಕು ಮಟ್ಟದ ಆಸ್ಪತ್ರೆ ಮಾಡುವುದಾದರೆ 142 ಕೋಟಿಯ ಕಟ್ಟಡ ಬೇಕಾಗಿತ್ತಾ ?

 8)ತಲೆಗೆ ಪೆಟ್ಟು ಬಿದ್ದರೆ ರಕ್ತಸ್ರಾವ ತಡೆಯುವ, ಜೀವ ಉಳಿಸುವ ನ್ಯೂರೋಲಾಜಿ ವಿಭಾಗ ಅಥವಾ ಟ್ರಾಮಾ ಸೆಂಟರ್ ಮಾಡುವ ಅವಕಾಶ ಹಾಳು ಮಾಡಿದ್ದೀರಿ, 
ಬಡವರಿಗೆ ಹಾರ್ಟ್ ಅಟ್ಯಾಕ್ ಆದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಜೀವ ಉಳಿಸ ಬಹುದಾದ "ಕ್ಯಾತ್ ಲ್ಯಾಬ್" ಮಾಡುವ ಅವಕಾಶ ಹಾಳು ಮಾಡಿದ್ದೀರಿ. ನಮ್ಮಲ್ಲಿ ನೂರಾರು ಜನ ಡಯಾಲಿಸಿಸ್ ಮಾಡಿಸಿಕೊಳ್ಳುವ ಬಡ ರೋಗಿಗಳಿದ್ದಾರೆ, ನೆಪ್ರೂಲಜಿಗೆ ನೇಮಕ ಮಾಡದೆ ತೆಗೆದು ಹಾಕಿದ್ದೀರಿ 
ನಮ್ಮ ಭಾಗದಿಂದ ದಿನಕ್ಕೆ ಸಾವಿರಾರು ಜನ ದೂರದ ಮಂಗಳೂರಿಗೆ, ಹುಬ್ಬಳ್ಳಿ ಹೋಗುತ್ತಿದ್ದಾರೆ, ಇದಕ್ಕೆ ಮುಕ್ತಿ ಯಾವಾಗ?

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0