ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆ... ಸಿಬ್ಬಂದಿಯೇ ಇಲ್ಲ!
80ಕ್ಕೂ ಹೆಚ್ಚು ಗ್ರಾಮಗಳ ಜನರ ಆರೋಗ್ಯ ಸೇವೆ ಸಂಕಷ್ಟದಲ್ಲಿ; ವಾರದೊಳಗೆ ಸಿಬ್ಬಂದಿ ನೇಮಕವಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ
ಆಪ್ತ ನ್ಯೂಸ್ ಕಾನಸೂರು:
ಸಿದ್ದಾಪುರ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕಾನಸೂರು ವ್ಯಾಪ್ತಿಯ ಸುಮಾರು 80ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಆಸರೆಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಂದು ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಅಗತ್ಯ ಸಿಬ್ಬಂದಿಯಿಲ್ಲದ ಕಾರಣ ಸಾರ್ವಜನಿಕರು ಸಮರ್ಪಕ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನಸೂರು, ದೇವಿಸರ, ಅಮ್ಮಚ್ಚಿ, ಹಂಗಾರಖಂಡ, ಗವಿನಗುಡ್ಡ, ಕರಮನೆ, ಕೋಡ್ಸರ, ಹಳದೋಟ, ಶೇಲೂರು, ನಾಣಿಕಟ್ಟಾ, ಬಾಳೂರು, ಹೊಸಗದ್ದೆ, ಅಡ್ಕಳ್ಳಿ, ಕೋಡಶಿಂಗೆ, ಹಿತ್ಲಕೈ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಪ್ರತಿದಿನ 100ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿಯ ಕೊರತೆಯಿಂದ ಆರೋಗ್ಯ ಸೇವೆ ತೀವ್ರವಾಗಿ ಹದಗೆಟ್ಟಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ. ರಶ್ಮಿ ಹಿರೇಮಠ ಹಾಗೂ ಒಬ್ಬ ಡಿ ದರ್ಜೆ ನೌಕರಿಯನ್ನು ಹೊರತುಪಡಿಸಿ ಉಳಿದ ಸಿಬ್ಬಂದಿ ಇಲ್ಲದಂತಾಗಿದೆ. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್, ಔಷಧ ವಿತರಕರು ಸೇರಿದಂತೆ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹೊಸ ನೇಮಕಾತಿ ಅಥವಾ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಿಬ್ಬಂದಿ ಕೊರತೆಯಿಂದಾಗಿ ವೈದ್ಯಾಧಿಕಾರಿಯೇ ರೋಗಿಗಳ ಪರೀಕ್ಷೆ ನಡೆಸುವುದು, ಔಷಧ ವಿತರಿಸುವುದು, ಇಂಜೆಕ್ಷನ್ ನೀಡುವುದು ಸೇರಿದಂತೆ ಬಹುತೇಕ ಎಲ್ಲಾ ಜವಾಬ್ದಾರಿಗಳನ್ನು ಒಬ್ಬರೇ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೋಗಿಗಳು ಗಂಟೆಗಟ್ಟಲೆ ಕಾಯಬೇಕಾಗುತ್ತಿದ್ದು, ವೈದ್ಯರ ಮೇಲೆಯೂ ಕೆಲಸದ ಒತ್ತಡ ಹೆಚ್ಚಾಗಿದೆ.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ವೈದ್ಯಾಧಿಕಾರಿಗಳು ರಜೆ ಪಡೆದರೆ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮುಚ್ಚುವ ಸ್ಥಿತಿ ಎದುರಾಗಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಸ್ಥಳೀಯರ ಪ್ರಕಾರ, ಕಾನಸೂರು ಪ್ರದೇಶವು ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಅಗತ್ಯ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯ ಸೇವೆ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರದೊಳಗೆ ಸಿಬ್ಬಂದಿ ನೇಮಕವಾಗದಿದ್ದರೆ ಪ್ರತಿಭಟನೆ
ಆಸ್ಪತ್ರೆಗೆ ಅಗತ್ಯ ವೈದ್ಯೇತರ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಬೇಕು. ಒಂದು ವಾರದೊಳಗೆ ಸಿಬ್ಬಂದಿ ನೇಮಕವಾಗದಿದ್ದರೆ ಆಸ್ಪತ್ರೆ ಎದುರು ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
"ಕಾನಸೂರು ಸುಮಾರು 80ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಇಲ್ಲಿನ ಜನರು ಈ ಆಸ್ಪತ್ರೆಯನ್ನೇ ನಂಬಿಕೊಂಡಿದ್ದಾರೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿಯೇ ಇಲ್ಲದಿರುವುದು ಅತ್ಯಂತ ದುರದೃಷ್ಟಕರ. ಒಂದು ವಾರದೊಳಗೆ ಸಿಬ್ಬಂದಿಯನ್ನು ಭರ್ತಿ ಮಾಡದಿದ್ದರೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು."
– ಮನೋಜ ಶಾನಭಾಗ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ
ಸ್ಥಳೀಯರ ಆಗ್ರಹದಂತೆ, ಗ್ರಾಮೀಣ ಭಾಗದ ಸಾವಿರಾರು ಜನರ ಆರೋಗ್ಯ ಹಿತದೃಷ್ಟಿಯಿಂದ ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಯನ್ನು ತುರ್ತಾಗಿ ನೇಮಿಸಿ ಆರೋಗ್ಯ ಸೇವೆಯನ್ನು ಸುಗಮಗೊಳಿಸಬೇಕೆಂಬ ಒತ್ತಾಯ ಇದೀಗ ಮತ್ತಷ್ಟು ಬಲಗೊಂಡಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



