ಶಾಲ್ಮಲಾ ತೀರದ ಸ್ನಾನಘಟ್ಟಕ್ಕೆ ಸಂಪರ್ಕ ರಸ್ತೆ: ₹5 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸೋಂದಾ ಗ್ರಾಮದ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶಾಲ್ಮಲಾ ನದಿತೀರದ ಸ್ನಾನಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಮಹತ್ವದ ಕಾಮಗಾರಿಗೆ ಚಾಲನೆ ದೊರೆಯಿತು. ₹5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ 2025-26ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಭೂಮಿಪೂಜೆ ನೆರವೇರಿತು.
ಶಾಲ್ಮಲಾ ನದಿಯ ತೀರದಲ್ಲಿರುವ ಸ್ನಾನಘಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರು ಮಳೆಗಾಲ ಸೇರಿದಂತೆ ಎಲ್ಲ ಋತುಗಳಲ್ಲೂ ಸುಗಮವಾಗಿ ಸಂಚರಿಸಲು ಈ ರಸ್ತೆ ಸಹಕಾರಿಯಾಗಲಿದೆ. ರಸ್ತೆ ಅಭಿವೃದ್ಧಿಯಿಂದ ಯಾತ್ರಾರ್ಥಿಗಳ ಸಂಚಾರ ಮತ್ತಷ್ಟು ಸುಲಭವಾಗಲಿದ್ದು, ಸ್ಥಳೀಯ ಮೂಲಸೌಕರ್ಯವೂ ಉತ್ತಮಗೊಳ್ಳಲಿದೆ ಎಂದು ತಿಳಿಸಲಾಯಿತು.
ಈ ಕಾಮಗಾರಿಯನ್ನು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲ್ಮಲಾ ತೀರದ ಸ್ನಾನಘಟ್ಟಕ್ಕೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದಲ್ಲಿ ಮಠದ ಕಾರ್ಯಾಧ್ಯಕ್ಷ ಎನ್.ವಿ. ಹೆಗಡೆ ಬೊಮ್ಮನಹಳ್ಳಿ, ಜಾಗೃತ ವೇದಿಕೆಯ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



