ಕಾನಸೂರು ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ ನೇಮಿಸಿ; ಇಲ್ಲದಿದ್ದರೆ ಜು.20ರಂದು ಬೃಹತ್ ಪ್ರತಿಭಟನೆ: ರಾಜು ಕಾನಸೂರು ಎಚ್ಚರಿಕೆ
ಆಪ್ತ ನ್ಯೂಸ್ ಶಿರಸಿ:
ಸಿದ್ದಾಪುರ ತಾಲೂಕಿನ ಗಡಿಭಾಗದಲ್ಲಿರುವ ಕಾನಸೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಖಾಯಂ ವೈದ್ಯಕೀಯ ಹಾಗೂ ಆಡಳಿತ ಸಿಬ್ಬಂದಿಯನ್ನು ತಕ್ಷಣ ನೇಮಿಸಬೇಕು. ಇಲ್ಲವಾದರೆ ಜುಲೈ 20ರಂದು ಆಸ್ಪತ್ರೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾನಸೂರು ಭಾಗದ ಸಾರ್ವಜನಿಕರ ಪರವಾಗಿ ರಾಜು ಕಾನಸೂರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಶಾಸಕ ಭೀಮಣ್ಣ ನಾಯ್ಕ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಕಳೆದ ಎರಡು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು ಮತ್ತು ಒಬ್ಬ ಡಿ ದರ್ಜೆ ನೌಕರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಪ್ರತಿದಿನ ಚಿಕಿತ್ಸೆಗಾಗಿ ಆಗಮಿಸುವ ನೂರಾರು ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕಾನಸೂರು ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ಸುಮಾರು 90ಕ್ಕೂ ಹೆಚ್ಚು ಹಳ್ಳಿಗಳ ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಸರ್ಕಾರ ಸಮರ್ಥ ವೈದ್ಯರನ್ನು ನೇಮಿಸಿದ್ದರೂ, ಅಗತ್ಯ ಸಿಬ್ಬಂದಿಯ ಕೊರತೆಯಿಂದ ಆಸ್ಪತ್ರೆಯ ಸೇವೆ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಆಸ್ಪತ್ರೆಯಲ್ಲಿ ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಹಾಗೂ ಆಡಳಿತ ಸಿಬ್ಬಂದಿ ಇಲ್ಲದಿರುವುದರಿಂದ ಒಬ್ಬ ರೋಗಿಯನ್ನು ಪರೀಕ್ಷಿಸಲು ಸುಮಾರು ಅರ್ಧ ಗಂಟೆ ಸಮಯ ಬೇಕಾಗುತ್ತಿದೆ. ಪರಿಣಾಮ ರೋಗಿಗಳು ದೀರ್ಘಕಾಲ ಕಾಯಬೇಕಾಗುತ್ತಿದ್ದು, ತುರ್ತು ಚಿಕಿತ್ಸೆ ಪಡೆಯುವುದೂ ಕಷ್ಟಕರವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ವರ್ಗಾವಣೆಯಾದ ಸಿಬ್ಬಂದಿಯ ಸ್ಥಾನಗಳಿಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸದೇ, ಇದ್ದ ಖಾಯಂ ಸಿಬ್ಬಂದಿಯನ್ನೂ ಬೇರೆಡೆಗೆ ಬಿಡುಗಡೆ ಮಾಡಿರುವುದರಿಂದ ಆಸ್ಪತ್ರೆ ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದರ ನೇರ ಪರಿಣಾಮ ಸಾರ್ವಜನಿಕರ ಆರೋಗ್ಯ ಸೇವೆಯ ಮೇಲೆಯೇ ಬೀಳುತ್ತಿದೆ ಎಂದು ಆರೋಪಿಸಲಾಗಿದೆ.
ಜುಲೈ 18ರೊಳಗೆ ಅಗತ್ಯ ವೈದ್ಯಕೀಯ ಹಾಗೂ ಆಡಳಿತ ಸಿಬ್ಬಂದಿಯನ್ನು ನೇಮಿಸದಿದ್ದರೆ, ಜುಲೈ 20ರಂದು ಕಾನಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆಸ್ಪತ್ರೆ ಎದುರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜು ಕಾನಸೂರು ಎಚ್ಚರಿಕೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



