ಸ್ವರ್ಣವಲ್ಲೀ ಶ್ರೀಗಳ 59ನೇ ವರ್ಧಂತಿ ಉತ್ಸವ; ರಕ್ತದಾನ, ಆರೋಗ್ಯ ಶಿಬಿರಕ್ಕೆ ಭರ್ಜರಿ ಸ್ಪಂದನೆ

Jun 23, 2026 - 21:05
 0  82
ಸ್ವರ್ಣವಲ್ಲೀ ಶ್ರೀಗಳ 59ನೇ ವರ್ಧಂತಿ ಉತ್ಸವ; ರಕ್ತದಾನ, ಆರೋಗ್ಯ ಶಿಬಿರಕ್ಕೆ ಭರ್ಜರಿ ಸ್ಪಂದನೆ

ಆಪ್ತ ನ್ಯೂಸ್ ಶಿರಸಿ:

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 59ನೇ ವರ್ಧಂತಿ ಉತ್ಸವವನ್ನು ಮಂಗಳವಾರ ಭಕ್ತಿ, ಶ್ರದ್ಧೆ ಹಾಗೂ ಸೇವಾ ಮನೋಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಾಸಂಸ್ಥಾನವು ಮಾನವೀಯ ಸೇವೆಯ ಸಂದೇಶ ಸಾರಿತು.

ವರ್ಧಂತಿ ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ 100ಕ್ಕೂ ಅಧಿಕ ಮಂದಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಸಿಕೊಂಡರೆ, 40ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ಕೈಜೋಡಿಸಿದರು.

ಗ್ರಾಮಾಭ್ಯುದಯ, ಟಿ.ಎಸ್.ಎಸ್. ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು. ವೈದ್ಯರಾದ ಡಾ. ವೀರೇಶ್ ಎಸ್. ಬಾಲೆಹೊಸೂರು, ಡಾ. ವೀಣಾ ವೆರ್ಣೇಕರ್, ಡಾ. ಸುಮನ್ ಹಾಗೂ ಇತರ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಉತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅಥರ್ವಶೀರ್ಷ ಪಾರಾಯಣ, ಮಹಾಗಣಪತಿ ಹವನ, ಶ್ರೀಸೂಕ್ತ ಹಾಗೂ ಪುರುಷಸೂಕ್ತ ಪಾರಾಯಣ, ಮಹಾಮೃತ್ಯುಂಜಯ ಜಪ, ಗ್ರಹಶಾಂತಿ, ಆಯುಷ್ಯಚರು ಶಾಂತಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಪುರೋಹಿತರಾದ ವೇ.ಮೂ. ಕೃಷ್ಣ ಜೋಶಿ, ವೇ.ಮೂ. ಚಿನ್ಮಯ ಜೋಶಿ ಸೇರಿದಂತೆ 50ಕ್ಕೂ ಅಧಿಕ ಋತ್ವಿಜರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಯಾಗಶಾಲೆಯಲ್ಲಿ ನಡೆದ ಪೂಜೆ, ಹವನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಖ್ಯಾತ ಗಾಯಕಿಯರಾದ ರಾಧಾ ದೇಸಾಯಿ ಹಾಗೂ ಅನುರಾಧಾ ಭಟ್ ಅವರು ಸುಮಧುರ ಭಕ್ತಿಗೀತೆಗಳ ಗಾಯನದ ಮೂಲಕ ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿದರು. ಅವರಿಗೆ ಪ್ರಕಾಶ ಹೆಗಡೆ ಹಾಗೂ ಎಂ.ಜಿ. ಭಟ್ಟ ಸಂಗೀತ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಭ್ಯುದಯದ ಅಧ್ಯಕ್ಷ ರಾಮಚಂದ್ರ ಹೆಗಡೆ ಕಂಚನಳ್ಳಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಹೇಮಂತ ಹೆಗಡೆ, ಎಂ.ಸಿ. ಹೆಗಡೆ ಶಿರಸಿಮಕ್ಕಿ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ ಕಳವೆ, ಆರ್.ಎನ್. ಭಟ್ಟ ಸುಗಾವಿ ಸೇರಿದಂತೆ ಹಲವು ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಭಕ್ತಿ, ಧರ್ಮ ಹಾಗೂ ಸಮಾಜಸೇವೆಯ ಸಮನ್ವಯದೊಂದಿಗೆ ನಡೆದ ಈ ವರ್ಧಂತಿ ಉತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವುದರ ಜೊತೆಗೆ ರಕ್ತದಾನ ಮತ್ತು ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0