ಕಾನಸೂರು ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ: ಇಬ್ಬರು ಸಿಬ್ಬಂದಿ ಅಮಾನತು; ಸಮಾಜ ಕಲ್ಯಾಣ ಇಲಾಖೆಯಿಂದ ಕಠಿಣ ಕ್ರಮ

Jun 23, 2026 - 09:39
 0  203
ಕಾನಸೂರು ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ: ಇಬ್ಬರು ಸಿಬ್ಬಂದಿ ಅಮಾನತು; ಸಮಾಜ ಕಲ್ಯಾಣ ಇಲಾಖೆಯಿಂದ ಕಠಿಣ ಕ್ರಮ

ಆಪ್ತ ನ್ಯೂಸ್ ಕಾನಸೂರು:

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗೋಕುಲ ಗೌಡ ಅನುಮಾನಾಸ್ಪದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಅಮಾನತುಗೊಂಡವರಲ್ಲಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ಹಾಗೂ ಸಮಾಜ ವಿಜ್ಞಾನ ಶಿಕ್ಷಕ ಜಾವೇದ್ ಎಚ್.ಎಸ್. ಮತ್ತು ಹಿಂದಿ ಶಿಕ್ಷಕ ಹಾಗೂ ಪ್ರಭಾರಿ ನಿಲಯ ಪಾಲಕರಾಗಿದ್ದ ಅಬ್ಬುತಲಹ ಸೇರಿದ್ದಾರೆ. ಇವರ ಅಮಾನತು ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಸುಮಾರು 15 ದಿನಗಳ ಹಿಂದೆ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಗೌಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣಕ್ಕೆ ನ್ಯಾಯ ದೊರಕಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕಾನಸೂರಿನಲ್ಲಿ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿ.ಎಸ್.ಪಿ. ಗೀತಾ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸಮಾಜ ಕಲ್ಯಾಣ ಇಲಾಖೆ ಪ್ರಾಥಮಿಕ ಹಂತದಲ್ಲೇ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಅದೇ ವೇಳೆ, ವಸತಿ ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಯವಾಗದಂತೆ ಅಮಾನತುಗೊಂಡ ಸಿಬ್ಬಂದಿಗಳ ಸ್ಥಾನಕ್ಕೆ ಶೀಘ್ರದಲ್ಲೇ ಪರ್ಯಾಯ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0