ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ರೌಡಿ 'ಮಂಜಾ' ಅರೆಸ್ಟ್!; ಮಹಾರಾಷ್ಟ್ರ ಗಡಿಯಲ್ಲಿ ರೋಚಕ ಕಾರ್ಯಾಚರಣೆ

ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ; ಹಳಿಯಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

Jun 22, 2026 - 09:35
 0  203
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ರೌಡಿ 'ಮಂಜಾ' ಅರೆಸ್ಟ್!; ಮಹಾರಾಷ್ಟ್ರ ಗಡಿಯಲ್ಲಿ ರೋಚಕ ಕಾರ್ಯಾಚರಣೆ

ಆಪ್ತ ನ್ಯೂಸ್‌ ಹಳಿಯಾಳ:

ಹಳಿಯಾಳದಲ್ಲಿ ಕರ್ತವ್ಯ ನಿರ್ವಹಣೆಗೆ ಬಂದಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ, ಬಳಿಕ ಪೊಲೀಸರ ಕೈಯಿಂದಲೇ ತಪ್ಪಿಸಿಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ @ ಮಚ್ಚ ಮಂಜಾ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾನುವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಜಾ ಬಂಧನಕ್ಕಾಗಿ ಹಲವು ದಿನಗಳಿಂದ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಆದರೆ, ಮೊಬೈಲ್ ಫೋನ್ ಬಳಸದೇ, ನಿರಂತರವಾಗಿ ಸ್ಥಳ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದ ಆತ ಪೊಲೀಸರಿಗೆ ಸಾಕಷ್ಟು ತಲೆನೋವಾಗಿ ಪರಿಣಮಿಸಿದ್ದ. ಕೊನೆಗೂ ಖಚಿತ ಮಾಹಿತಿ ಆಧರಿಸಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.

ವೈರಲ್ ಆಗಿದ್ದ ದಾದಾಗಿರಿಯ ವಿಡಿಯೋ

ಕೆಲ ದಿನಗಳ ಹಿಂದೆ ಹಳಿಯಾಳದ ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಂಜಾ, ಪರಿಸ್ಥಿತಿ ನಿಯಂತ್ರಿಸಲು ಬಂದಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಪಿಎಸ್‌ಐ ಬಸವರಾಜ ಮಬನೂರು ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದ ವಿಚಾರ ಪೊಲೀಸ್ ಇಲಾಖೆಗೆ ಭಾರೀ ಮುಜುಗರ ಉಂಟುಮಾಡಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪಿಎಸ್‌ಐ ಬಸವರಾಜ ಮಬನೂರು ಅವರನ್ನು ಅಮಾನತುಗೊಳಿಸಲಾಗಿತ್ತು. ಜೊತೆಗೆ ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಎಂಟು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು.

ರೋಚಕ ಕಾರ್ಯಾಚರಣೆಯಲ್ಲಿ ಬಂಧನ

ಆರೋಪಿ ಬಂಧನಕ್ಕಾಗಿ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹಳಿಯಾಳ ಹಾಗೂ ದಾಂಡೇಲಿ ಪಿಎಸ್‌ಐಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್ ಹಾಗೂ ಕಿರಣ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಹಲವು ದಿನಗಳಿಂದ ನಿರಂತರ ಶೋಧ ಕಾರ್ಯ ನಡೆಸಲಾಗುತ್ತಿತ್ತು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಂ.ಎಂ. ಮುಲ್ಲಾ, ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ ಹಾಗೂ ಬಸವರಾಜ ಹಗರಿ ಸೇರಿದಂತೆ ಹಳಿಯಾಳ, ದಾಂಡೇಲಿ ಹಾಗೂ ರಾಮನಗರ ಪೊಲೀಸ್ ಠಾಣೆಗಳ ಸಿಬ್ಬಂದಿ ಭಾಗವಹಿಸಿದ್ದರು.

ಪೊಲೀಸರ ಮರ್ಯಾದೆ ಮರುಸ್ಥಾಪಿಸಿದ ಬಂಧನ

ಪೊಲೀಸರ ಎದುರಲ್ಲೇ ದಾದಾಗಿರಿ ಮೆರೆದ ಬಳಿಕ ತಪ್ಪಿಸಿಕೊಂಡಿದ್ದ ಮಂಜಾ ಬಂಧನ ಪ್ರಕರಣವು ಇಲಾಖೆಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತ್ತು. ಇದೀಗ ಮಹಾರಾಷ್ಟ್ರ ಗಡಿಯಲ್ಲಿ ನಡೆಸಿದ ಯಶಸ್ವಿ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇಲಾಖೆಯ ಗೌರವವನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0