ಊಟ ಕೇಳಿದ್ದಕ್ಕೆ ಹಸಿದ ಭಿಕ್ಷುಕ ದಂಪತಿ ಮೇಲೆ ಹಲ್ಲೆ! ಕುಮಟಾದ ಗೋವರ್ಧನ್ ಹೋಟೆಲ್ ಮಾಲೀಕ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

Jun 23, 2026 - 09:06
 0  175
ಊಟ ಕೇಳಿದ್ದಕ್ಕೆ ಹಸಿದ ಭಿಕ್ಷುಕ ದಂಪತಿ ಮೇಲೆ ಹಲ್ಲೆ! ಕುಮಟಾದ ಗೋವರ್ಧನ್ ಹೋಟೆಲ್ ಮಾಲೀಕ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಆಪ್ತ ನ್ಯೂಸ್‌ ಕುಮಟಾ:

ಹೊಟ್ಟೆ ಹಸಿವಿನಿಂದ ಹೋಟೆಲ್‌ಗೆ ಬಂದು ಊಟ ನೀಡುವಂತೆ ಮನವಿ ಮಾಡಿದ ಭಿಕ್ಷುಕ ದಂಪತಿಗೆ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ಗೋವರ್ಧನ್ ಹೋಟೆಲ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.

ಹಲ್ಲೆಗೊಳಗಾದವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದೇವಿಕೆರೆ ಗ್ರಾಮದ ನಿವಾಸಿಗಳಾದ ರಮೇಶ ದ್ಯಾಮಣ್ಣ ಅಲೆಮಾರಿ (62) ಹಾಗೂ ಅವರ ಪತ್ನಿ ದ್ಯಾಮವ್ವ ರಮೇಶ ಅಲೆಮಾರಿ (51) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಗೋವರ್ಧನ್ ಹೋಟೆಲ್ ಮಾಲೀಕ ಗಣೇಶ ನಾಯ್ಕ ಹಾಗೂ ಹೋಟೆಲ್ ವಾಚ್‌ಮನ್ ಗಣೇಶ ಗುರಕಾ ವಿರುದ್ಧ ದೂರು ದಾಖಲಾಗಿದೆ.

ಊಟ ಕೇಳಿದ್ದೇ ಕಾರಣವಾಯಿತೇ?

ಮಧ್ಯಾಹ್ನದ ವೇಳೆಯಲ್ಲಿ ಭಿಕ್ಷುಕ ದಂಪತಿ ಗೋವರ್ಧನ್ ಹೋಟೆಲ್‌ಗೆ ತೆರಳಿ, ಹಸಿವಾಗಿರುವುದಾಗಿ ಹೇಳಿ ಊಟ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಕೋಪಗೊಂಡು ದಂಪತಿಯನ್ನು ಹೊರಗೆ ಹೋಗುವಂತೆ ಹೇಳಿದ್ದಲ್ಲದೆ, ತಳ್ಳಿ-ತಳ್ಳಾಡಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹಲ್ಲೆಯ ವೇಳೆ ರಮೇಶ ಅಲೆಮಾರಿ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ಪತ್ನಿ ದ್ಯಾಮವ್ವಗೂ ಹಲ್ಲೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ನಡೆದ ಬಳಿಕ ದಂಪತಿ ರಸ್ತೆ ಮಧ್ಯೆಯೇ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದರೆಂದು ತಿಳಿದುಬಂದಿದೆ.

ಪೊಲೀಸರ ತ್ವರಿತ ಸ್ಪಂದನೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಮಟಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳು ದಂಪತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಸಂತ್ರಸ್ತರ ದೂರಿನ ಮೇರೆಗೆ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಹಸಿವಿನಿಂದ ಊಟ ಕೇಳಿದ ಬಡ ಭಿಕ್ಷುಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರೊಂದಿಗೆ ಮಾನವೀಯತೆ ಪ್ರದರ್ಶಿಸುವ ಬದಲು ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೊಲೀಸರು ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 2
Sad Sad 0
Wow Wow 0