ಬೆಂಗಳೂರು ನಾಗರಭಾವಿಯಲ್ಲಿ ಸ್ವರ್ಣರಶ್ಮಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಯುವಜನರ ಭವಿಷ್ಯ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಚಾಲನೆ
ಆಪ್ತ ನ್ಯೂಸ್ ಶಿರಸಿ:
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಅಂಗಸಂಸ್ಥೆಯಾದ ಬೆಂಗಳೂರಿನ ಸ್ವರ್ಣರಶ್ಮಿ ಪ್ರತಿಷ್ಠಾನ ವತಿಯಿಂದ ಸ್ಥಾಪಿಸಲಾಗುತ್ತಿರುವ ಸ್ವರ್ಣರಶ್ಮಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನೂತನ ಕಟ್ಟಡದ ಭವ್ಯ ಶಿಲಾನ್ಯಾಸ ಕಾರ್ಯಕ್ರಮ ಬೆಂಗಳೂರಿನ ನಾಗರಭಾವಿ ವರ್ತುಲ ರಸ್ತೆಯ ಎಂ.ಪಿ.ಎಂ. ಬಡಾವಣೆಯಲ್ಲಿರುವ ನಿವೇಶನದಲ್ಲಿ ಶುಕ್ರವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಹಾಗೂ ಅವರ ಅಮೃತಹಸ್ತಗಳಿಂದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ವೇದಮಂತ್ರಗಳ ಘೋಷ, ಪೂಜಾ-ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳ ಮಧ್ಯೆ ನಡೆದ ಈ ಸಮಾರಂಭದಲ್ಲಿ ಭಕ್ತರು ಹಾಗೂ ಗಣ್ಯರು ಭಾಗವಹಿಸಿ ಯೋಜನೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಗುಣಮಟ್ಟದ ಕೌಶಲ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವರ್ಣರಶ್ಮಿ ಪ್ರತಿಷ್ಠಾನ ಆರಂಭಿಸುತ್ತಿರುವ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮುನಿರತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜಮುಖಿ ಉದ್ದೇಶದೊಂದಿಗೆ ಸ್ಥಾಪನೆಯಾಗುತ್ತಿರುವ ಈ ಸಂಸ್ಥೆಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಯುವಜನರಲ್ಲಿ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ, ವಿವಿಧ ಉದ್ಯೋಗಾಧಾರಿತ ಕೋರ್ಸ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ತರಬೇತಿಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಈ ನೂತನ ಕಟ್ಟಡ ನಿರ್ಮಾಣದೊಂದಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರೆಯಲಿದ್ದು, ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ತರಬೇತಿ ಕೇಂದ್ರವಾಗಿ ರೂಪುಗೊಳ್ಳುವ ವಿಶ್ವಾಸ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಸ್ವರ್ಣರಶ್ಮಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸುಬ್ರಾಯ ಎಂ. ಹೆಗಡೆ, ಉಪಾಧ್ಯಕ್ಷ ಎನ್. ರಮೇಶ್, ಆಡಳಿತ ಮಂಡಳಿಯ ಸದಸ್ಯರು, ಭಕ್ತಾದಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಯೋಜನೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಆರಂಭವಾಗುವುದರಿಂದ ಯುವಜನರಿಗೆ ಉದ್ಯೋಗಮುಖಿ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹೊಸ ಅವಕಾಶಗಳು ದೊರೆಯಲಿದ್ದು, ಸಮಾಜದ ಸಮಗ್ರ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



