ಮುಂಡಗೋಡ ಹೆಸ್ಕಾಂ ಎಇಇ ಧರ್ಮರಾಜ್ ಲೋಕಾಯುಕ್ತ ಬಲೆಗೆ: ₹65 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸೆರೆ

Jun 24, 2026 - 11:28
 0  25
ಮುಂಡಗೋಡ ಹೆಸ್ಕಾಂ ಎಇಇ ಧರ್ಮರಾಜ್ ಲೋಕಾಯುಕ್ತ ಬಲೆಗೆ: ₹65 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸೆರೆ

ಆಪ್ತ ನ್ಯೂಸ್ ಮುಂಡಗೋಡ:

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಹೆಸ್ಕಾಂ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಧರ್ಮರಾಜ್ ಬೆಡಸಗಾಂವ್ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಮೇರೆಗೆ ಕಾರವಾರ ಲೋಕಾಯುಕ್ತ ಘಟಕದ ಅಧಿಕಾರಿಗಳು ಬುಧವಾರ ಮುಂಡಗೋಡಿನ ಹೆಸ್ಕಾಂ ಕಚೇರಿಯಲ್ಲಿ ದಿಢೀರ್ ದಾಳಿ ನಡೆಸಿದರು. ಈ ವೇಳೆ ₹65 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಎಇಇ ಧರ್ಮರಾಜ್ ಅವರನ್ನು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿಸಿಎಂ ವಸತಿ ನಿಲಯದ ವಿದ್ಯುತ್ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ ಹಾಗೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬಲೆ ಬೀಸಿದ ಅಧಿಕಾರಿಗಳು ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳದಲ್ಲೇ ಪರಿಶೀಲನೆ ನಡೆಸಿದ್ದು, ದಾಖಲೆಗಳ ಪರಿಶೀಲನೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಲೋಕಾಯುಕ್ತ ದಾಳಿಯ ಸುದ್ದಿ ಮುಂಡಗೋಡಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಕುರಿತು ಲೋಕಾಯುಕ್ತ ಇಲಾಖೆಯಿಂದ ಇನ್ನಷ್ಟು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0