ಶಿರಸಿಯಲ್ಲಿ ಭೂಕುಸಿತ ಸಂತ್ರಸ್ತರಿಗೆ ನೆರವು: "ಯಡಿಯೂರಪ್ಪ ಸರ್ಕಾರದಲ್ಲಿ 48 ಗಂಟೆಯೊಳಗೆ ಪರಿಹಾರ ಸಿಗುತ್ತಿತ್ತು, ಈಗ ಅಧಿಕಾರಿಗಳ ನಿರ್ಲಕ್ಷ್ಯ" – ಅನಂತಮೂರ್ತಿ ಹೆಗಡೆ

Jul 12, 2026 - 18:27
 0  64
ಶಿರಸಿಯಲ್ಲಿ ಭೂಕುಸಿತ ಸಂತ್ರಸ್ತರಿಗೆ ನೆರವು: "ಯಡಿಯೂರಪ್ಪ ಸರ್ಕಾರದಲ್ಲಿ 48 ಗಂಟೆಯೊಳಗೆ ಪರಿಹಾರ ಸಿಗುತ್ತಿತ್ತು, ಈಗ ಅಧಿಕಾರಿಗಳ ನಿರ್ಲಕ್ಷ್ಯ" – ಅನಂತಮೂರ್ತಿ ಹೆಗಡೆ

ಆಪ್ತ ನ್ಯೂಸ್ ಶಿರಸಿ:

"ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ ಮನೆಗಳಿಗೆ ಹಾನಿಯಾದರೆ 24ರಿಂದ 48 ಗಂಟೆಗಳೊಳಗೆ ಪರಿಹಾರ ಒದಗಿಸಲಾಗುತ್ತಿತ್ತು. ಆದರೆ ಈಗಿನ ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ" ಎಂದು ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ.

ತಾಲೂಕಿನ ಹುತ್ತಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟನಮನೆ ಗ್ರಾಮದಲ್ಲಿ ಶಿವಾನಂದ ಎಸ್. ಗೊಂಡೇನಹಳ್ಳಿ ಅವರ ಮನೆಯ ಪಕ್ಕದಲ್ಲಿ ಭೂಕುಸಿತ ಸಂಭವಿಸಿ, ಮನೆಯ ಕೋಣೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ವಿತರಿಸಿದ ಬಳಿಕ ಅವರು ಮಾತನಾಡಿದರು.

ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಅಧಿಕಾರಿಗಳು ಇನ್ನೂ ಹಾನಿಯ ಅಂದಾಜು ವರದಿಯನ್ನೇ ಸಲ್ಲಿಸಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೆ ಮಳೆ ಸುರಿದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಭೀತಿ ಸಂತ್ರಸ್ತ ಕುಟುಂಬವನ್ನು ಕಾಡುತ್ತಿದೆ. ಅಲ್ಲದೆ, ಧರೆ ಕುಸಿಯದಂತೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ತಡೆಗೋಡೆಯೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.

ಶಿವಾನಂದ ಅವರು ಔಷಧ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬದವರಾಗಿದ್ದು, ಇಂತಹ ಕುಟುಂಬಕ್ಕೆ ನಾಲ್ಕು ದಿನಗಳಾದರೂ ಯಾವುದೇ ಪರಿಹಾರ ದೊರೆಯದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದರು. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವುದರಿಂದ ವಿಳಂಬ ಮಾಡದೆ ತಕ್ಷಣವೇ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ವೇಳೆ ಅನಂತಮೂರ್ತಿ ಹೆಗಡೆ ಅವರು ಹುತ್ತಗಾರು ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿ (ವಿಎ) ಅವರಿಗೆ ದೂರವಾಣಿ ಕರೆ ಮಾಡಿ, ಹಾನಿಯ ವರದಿಯನ್ನು ಶೀಘ್ರವಾಗಿ ಸಲ್ಲಿಸಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್, ಹುತ್ತಗಾರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಫಕೀರಪ್ಪ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0