ಮತ್ತೆ ಕೈಚಳಕ ತೋರಿಸಿದ ಸರಣಿ ಕಳ್ಳ ನಾರಾಯಣ ಸಿದ್ದಿ? ಕಳ್ಳತನದ ನಂತರ ಅಂಗಡಿ ಶಟರ್‌ಗೆ ಕರೆಂಟ್ ಸಂಪರ್ಕ ಕೊಟ್ಟ ಆಸಾಮಿ; ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ
ಆಪ್ತ ನ್ಯೂಸ್ ರಾಮನಗುಳಿ:
ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿ ಸಮೀಪದ ನರಸಿಂಹ ಭಾಗವತ ಅವರ ಮಾಲೀಕತ್ವದ ಅನ್ನಪೂರ್ಣ ಮಾರ್ಟ್‌ನಲ್ಲಿ ಕಳೆದ ಭಾನುವಾರ ನಡೆದ ಕಳ್ಳತನ ಪ್ರಕರಣ ಮತ್ತೆ ಆತಂಕ ಮೂಡಿಸಿದೆ. ಈ ಕೃತ್ಯದ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿರುವ ನಾರಾಯಣ ಸಿದ್ದಿ ಇದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ ಬಳಿಕ, ಅಂಗಡಿ ಮಾಲೀಕರಿಗೆ ಅಪಾಯವಾಗಲಿ ಎನ್ನುವ ಉದ್ದೇಶದಿಂದ ವಿದ್ಯುತ್ ಸಂಪರ್ಕವನ್ನು ಅಪಾಯಕಾರಿಯಾಗಿ ಬಿಟ್ಟು ಹೋಗಿರುವ ಆರೋಪವೂ ಕೇಳಿಬಂದಿದೆ. ಈ ಸಂಪೂರ್ಣ ಘಟನೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳ್ಳತನದ ವೀಡಿಯೋ ಇಲ್ಲಿದೆ ನೋಡಿ
Video:
https://youtu.be/b9cGMF_7ktE
ಸ್ಥಳೀಯರ ಆರೋಪದಂತೆ, ಇದೇ ವ್ಯಕ್ತಿ ಕಳೆದ ಮೂರ್ನಾಲ್ಕು ಬಾರಿ ಇದೇ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದಾನೆ. ಆ ಸಂದರ್ಭಗಳಲ್ಲಿಯೂ ಪ್ರಕರಣ ದಾಖಲಾಗಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ. ಅಲ್ಲದೆ ಹೆಗ್ಗಾರ, ಕಲ್ಲೇಶ್ವರ ಸೇರಿದಂತೆ ಸುತ್ತಮುತ್ತಲಿನ ಹಲವು ಸಹಕಾರಿ ಸಂಘಗಳಲ್ಲೂ ಕಳ್ಳತನ ಪ್ರಕರಣಗಳಲ್ಲಿ ಇದೇ ವ್ಯಕ್ತಿಯ ಹೆಸರು ಕೇಳಿಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಂದಿನ ಪ್ರಕರಣಗಳಲ್ಲಿ ನಾರಾಯಣ ಸಿದ್ದಿಯ ಕೆಲ ಸಹಚರರನ್ನು ಪೊಲೀಸರು ಬಂಧಿಸಿದ್ದರೂ, ಪ್ರಮುಖ ಆರೋಪಿ ಎನ್ನಲಾಗುತ್ತಿರುವ ನಾರಾಯಣ ಸಿದ್ದಿಯನ್ನು ಬಂಧಿಸಲು ವಿಫಲರಾಗಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಈ ಬಾರಿ ಕೇವಲ ಕಳ್ಳತನಕ್ಕಷ್ಟೇ ಸೀಮಿತವಾಗದೇ, ಅಂಗಡಿ ಮಾಲೀಕರ ಜೀವಕ್ಕೂ ಅಪಾಯ ಉಂಟುಮಾಡುವ ರೀತಿಯಲ್ಲಿ ಕೃತ್ಯ ಎಸಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ. ಆದರೂ ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇಪದೇ ಒಂದೇ ವ್ಯಕ್ತಿ ಕಳ್ಳತನ ನಡೆಸುತ್ತಿದ್ದರೂ, ಗಂಭೀರ ಆರೋಪಗಳು ಕೇಳಿಬರುತ್ತಿದ್ದರೂ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
What's Your Reaction?
Like
1
Dislike
0
Love
0
Funny
1
Angry
1
Sad
0
Wow
0



