ಒಂದು ಬೈಕ್ ಕಳ್ಳತನದಿಂದ ಬಯಲಾಯಿತು ಸರಣಿ ಕಳ್ಳನ 'ಕ್ರೈಂ ಹಿಸ್ಟರಿ'!; ಉತ್ತರ ಕನ್ನಡದ 10ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿ ಅಂದರ್

Jul 9, 2026 - 17:45
 0  159
ಒಂದು ಬೈಕ್ ಕಳ್ಳತನದಿಂದ ಬಯಲಾಯಿತು ಸರಣಿ ಕಳ್ಳನ 'ಕ್ರೈಂ ಹಿಸ್ಟರಿ'!; ಉತ್ತರ ಕನ್ನಡದ 10ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿ ಅಂದರ್

ಆಪ್ತ ನ್ಯೂಸ್ ಅಂಕೋಲಾ:

ಅಂಕೋಲಾ ಬಸ್ ನಿಲ್ದಾಣದ ಸಮೀಪ ಕಳವಾಗಿದ್ದ ಒಂದು ಬೈಕ್ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ತನಿಖೆಯ ವೇಳೆ ಅಚ್ಚರಿಯ ಮಾಹಿತಿಯೊಂದು ಲಭಿಸಿದೆ. ಬಂಧಿತ ಆರೋಪಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಸರಣಿ ಕಳ್ಳ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅಂಕೋಲಾದ ಕಾಕರಮಠದ ನಿವಾಸಿ ಫಿರೋಜ್ ಸತ್ತಾರ್ ಖಾನ್ ಅವರಿಗೆ ಸೇರಿದ ಸುಮಾರು ₹35 ಸಾವಿರ ಮೌಲ್ಯದ ಎಕ್ಸಿಸ್ ಕಂಪನಿಯ ಮೋಟಾರ್‌ಸೈಕಲ್ ಜೂನ್ 26ರಂದು ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಸಮೀಪದಿಂದ ಕಳವಾಗಿತ್ತು. ಈ ಕುರಿತು ಜೂನ್ 28ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಂಕೋಲಾ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ತನಿಖೆಯ ವೇಳೆ ಶಿರಸಿ ತಾಲೂಕಿನ ಅರೇಕೊಪ್ಪ ನಿವಾಸಿ ಖಾಲಿದ್ ಶರೀಫ್ ಸಾಬ್ ಕನವಳ್ಳಿ (33) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಆರೋಪಿಯಿಂದ ಕಳುವಾದ ಬೈಕ್‌ನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ವಿರುದ್ಧ ಶಿರಸಿ ಗ್ರಾಮೀಣ, ಶಿರಸಿ ಹೊಸ ಮಾರುಕಟ್ಟೆ, ಬನವಾಸಿ, ಯಲ್ಲಾಪುರ, ಕಾರವಾರ ನಗರ, ಕುಮಟಾ, ಹಳಿಯಾಳ ಹಾಗೂ ತಡಸ ಪೊಲೀಸ್ ಠಾಣೆಗಳಲ್ಲಿ ಸೇರಿ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬಹಿರಂಗವಾಗಿದೆ. ಆರೋಪಿಯ ಇತರೆ ಕೃತ್ಯಗಳ ಕುರಿತು ಪೊಲೀಸರು ಇನ್ನಷ್ಟು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪವಿಭಾಗದ ಡಿವೈಎಸ್‌ಪಿ ಗಿರೀಶ ಎಸ್.ವಿ. ಅವರ ಮಾರ್ಗದರ್ಶನದಲ್ಲಿ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸ್‌ಐಗಳಾದ ವಿಶ್ವನಾಥ ನಿಂಗೊಳ್ಳಿ, ಲಲಿತಾ ರಜಪೂತ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ್, ಮಹಾದೇವ ಸಿದ್ದಿ, ಆಸಿಫ್ ಆರ್.ಕೆ. ಮತ್ತು ಗಿರೀಶ ಲಮಾಣಿ ಅವರ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಅಲ್ಪಾವಧಿಯಲ್ಲೇ ಭೇದಿಸಿದೆ.

ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದು, ಸಾರ್ವಜನಿಕ ವಲಯದಲ್ಲಿಯೂ ಪೊಲೀಸರ ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0