ಎರಡು ವರ್ಷಗಳ ಹಿಂದೆ ಕುಸಿದ ರಸ್ತೆ ದುರಸ್ತಿಗೆ ಒತ್ತಾಯ: ಶಾಸಕ ಭೀಮಣ್ಣ ನಾಯ್ಕ್‌ಗೆ ಶೇಡಿ ದಂಟಕಲ್ ಗ್ರಾಮಸ್ಥರ ಮನವಿ

Jul 29, 2026 - 21:22
 0  76
ಎರಡು ವರ್ಷಗಳ ಹಿಂದೆ ಕುಸಿದ ರಸ್ತೆ ದುರಸ್ತಿಗೆ ಒತ್ತಾಯ: ಶಾಸಕ ಭೀಮಣ್ಣ ನಾಯ್ಕ್‌ಗೆ ಶೇಡಿ ದಂಟಕಲ್ ಗ್ರಾಮಸ್ಥರ ಮನವಿ

ಆಪ್ತ ನ್ಯೂಸ್ ಸಿದ್ದಾಪುರ:

ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದ ಕುಸಿದು ಹಾನಿಗೊಳಗಾಗಿರುವ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶೇಡಿ ದಂಟಕಲ್ ಗ್ರಾಮಸ್ಥರು ಶಿರಸಿ–ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಅಗ್ನಿ ಅವಘಡದಲ್ಲಿ ಬೆಳೆ ಕಳೆದುಕೊಂಡ ರೈತರ ಮನೆಗೆ ಭೇಟಿ ನೀಡಲು ಶೇಡಿ ದಂಟಕಲ್‌ಗೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ಶಾಸಕರನ್ನು ಭೇಟಿ ಮಾಡಿ ಅಡ್ಕಳ್ಳಿ–ದಂಟಕಲ್–ಕುಚಗುಂಡಿ–ಯಲೂಗಾರ್ ಕ್ರಾಸ್ ಸಂಪರ್ಕ ರಸ್ತೆಯ ದುಸ್ಥಿತಿಯನ್ನು ವಿವರಿಸಿದರು.

ಗ್ರಾಮಸ್ಥರ ಪ್ರಕಾರ, ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದ ಸಿಮೆಂಟ್ ರಸ್ತೆಯ ಒಂದು ಬದಿಯು ಕುಸಿದು, ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪರಿಣಾಮ ಭಾರಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಸಾರ್ವಜನಿಕರು ಆತಂಕದ ನಡುವೆಯೇ ಸಂಚರಿಸುವಂತಾಗಿದೆ ಎಂದು ಅವರು ಗಮನ ಸೆಳೆದರು.

ಮನವಿ ಸ್ವೀಕರಿಸಿದ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಂಡು ರಸ್ತೆ ದುರಸ್ತಿಗೆ ಮುಂದಾಗುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಅಡ್ಕಳ್ಳಿ–ದಂಟಕಲ್–ಕುಚಗುಂಡಿ–ಯಲೂಗಾರ್ ರಸ್ತೆಯ ಹಲವು ಭಾಗಗಳಲ್ಲಿ ಭಾರಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಗ್ರಾಮಸ್ಥರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೊಂಡಗಳನ್ನು ಕೂಡಲೇ ಮುಚ್ಚಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯರು ಮತ್ತೊಮ್ಮೆ ಮನವಿ ಸಲ್ಲಿಸಿದರು. ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಭೀಮಣ್ಣ ನಾಯ್ಕ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾನಸೂರು ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಕೃಷ್ಣಮೂರ್ತಿ ಹೆಗಡೆ, ಸ್ಥಳೀಯರಾದ ಸಂತೋಷ ಹೆಗಡೆ, ರಾಜಶೇಖರ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0