ಬಿದಿರಿನ ಕೋಲಿನಿಂದ ರಾಜ್ಯ ಚಾಂಪಿಯನ್ ಆಗಿದ್ದ ದಿವ್ಯಾಗೆ ₹86 ಸಾವಿರ ಮೌಲ್ಯದ ಪೋಲ್ವಾಲ್ಟ್ ಪೋಲ್ ಉಡುಗೊರೆ
ಆಪ್ತ ನ್ಯೂಸ್ ಕುಮಟಾ:
ಸಾಧಿಸಲು ಪ್ರತಿಭೆ ಮತ್ತು ಛಲ ಇದ್ದರೆ ಯಾವುದೇ ಅಡೆತಡೆ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಕುಮಟಾದ ವಿದ್ಯಾರ್ಥಿನಿ ಕು. ದಿವ್ಯಾ ಸಿ. ನಾಯ್ಕ್ ಜೀವಂತ ಉದಾಹರಣೆಯಾಗಿದ್ದಾಳೆ.
ಕುಮಟಾ ತಾಲೂಕಿನ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ದಿವ್ಯಾ, ಕಳೆದ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು.
ವಿಶೇಷವೆಂದರೆ, ಪೋಲ್ವಾಲ್ಟ್ ಸ್ಪರ್ಧೆಗೆ ಅಗತ್ಯವಾದ ಗುಣಮಟ್ಟದ ಪೋಲ್ ಇಲ್ಲದ ಕಾರಣ, ಬಿದಿರಿನ ಕೋಲನ್ನೇ ಬಳಸಿಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಚಾಂಪಿಯನ್ ಆಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು.
ದಿವ್ಯಾ ಎದುರಿಸುತ್ತಿದ್ದ ಈ ಸಮಸ್ಯೆಯನ್ನು ಗಮನಿಸಿದ ಕುಮಟಾ ಶಾಸಕ ದಿನಕರ ಶೆಟ್ಟಿ, ಕೈಗಾರಿಕೋದ್ಯಮಿ ಎಂ.ಎನ್. ಕೆಮಿಕಲ್ಸ್ ಸಂಸ್ಥೆಯ ಮಾಲೀಕರಾದ ನವೀನ್ ಪಾಟೀಲ್ ಅವರ ಗಮನಕ್ಕೆ ತಂದರು. ವಿಷಯ ತಿಳಿದ ಕೂಡಲೇ ಸ್ಪಂದಿಸಿದ ನವೀನ್ ಪಾಟೀಲ್ ಅವರು ಸುಮಾರು ₹86 ಸಾವಿರ ಮೌಲ್ಯದ ಎರಡು ಪೋಲ್ವಾಲ್ಟ್ ಪೋಲ್‌ಗಳನ್ನು ವಿದೇಶದಿಂದ ತರಿಸಿ ದಿವ್ಯಾಗೆ ನೀಡುವ ವ್ಯವಸ್ಥೆ ಮಾಡಿದರು.
ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಎಂ.ಎನ್. ಕೆಮಿಕಲ್ಸ್ ಸಂಸ್ಥೆಯ ಮಾಲೀಕರ ಪುತ್ರ ನಿತೀನ್ ಪಾಟೀಲ್ ಅವರ ಸಮ್ಮುಖದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಕು. ದಿವ್ಯಾ ಸಿ. ನಾಯ್ಕ್ ಅವರಿಗೆ ಅತ್ಯಾಧುನಿಕ ಪೋಲ್ವಾಲ್ಟ್ ಪೋಲ್‌ಗಳನ್ನು ಹಸ್ತಾಂತರಿಸಲಾಯಿತು.
ಈ ನೆರವಿನಿಂದ ದಿವ್ಯಾ ಮುಂದಿನ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಶುಭ ಹಾರೈಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



