ಸುಟ್ಟ ಗಾಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು; ಪತಿ ಗಂಭೀರ, ಸಾವಿನ ಹಿಂದೆ ಸಂಶಯ ವ್ಯಕ್ತಪಡಿಸಿದ ಸಹೋದರ

Jul 26, 2026 - 21:19
 0  135
ಸುಟ್ಟ ಗಾಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು; ಪತಿ ಗಂಭೀರ, ಸಾವಿನ ಹಿಂದೆ ಸಂಶಯ ವ್ಯಕ್ತಪಡಿಸಿದ ಸಹೋದರ

ಆಪ್ತ ನ್ಯೂಸ್ ಮುಂಡಗೋಡ:

ತಾಲೂಕಿನ ಮಳಗಿ ಸಮೀಪದ ಬೊರನಗುಡ್ಡ ಗ್ರಾಮದಲ್ಲಿ ನಿಗೂಢವಾಗಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರನ್ನು ಶ್ರೀಮತಿ ಜ್ಯೋತಿ ಕೃಷ್ಣಾ ಜಾದವ (35) ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಬೊರನಗುಡ್ಡ ಗ್ರಾಮದ ಮನೆಯಲ್ಲಿ ಸಂಭವಿಸಿದ್ದ ಘಟನೆಯಲ್ಲಿ ಜ್ಯೋತಿ ಜಾದವ ಹಾಗೂ ಅವರ ಪತಿ ಕೃಷ್ಣಾ ಜಾದವ ಇಬ್ಬರೂ ಬೆಂಕಿಗೆ ಆಹುತಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಸ್ಥಳೀಯರು ಇಬ್ಬರನ್ನೂ ತಕ್ಷಣ ಚಿಕಿತ್ಸೆಗಾಗಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಜ್ಯೋತಿ ಜಾದವ ಅವರ ದೇಹದ ಬಹುಭಾಗ ಸುಟ್ಟಿದ್ದರಿಂದ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಂದೆಡೆ, ಪತಿ ಕೃಷ್ಣಾ ಜಾದವ ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ.

ಸಾವಿನ ಹಿಂದೆ ಸಂಶಯ

ಈ ನಡುವೆ ಜ್ಯೋತಿ ಜಾದವ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರ ಸಹೋದರ, ಘಟನೆ ಸಹಜವಲ್ಲ ಎಂದು ಆರೋಪಿಸಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದು, ಬೆಂಕಿ ಅವಘಡ ಹೇಗೆ ಸಂಭವಿಸಿತು, ಅದು ಆಕಸ್ಮಿಕವೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0