ಶಿರಸಿ-ಸಿದ್ದಾಪುರದ 225 ಸೇರಿ ಜಿಲ್ಲೆಯ 604 ಹಳ್ಳಿಗಳಿಗೆ ಕಸ್ತೂರಿರಂಗನ್ ಕಂಟಕ: ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಭೀಮಣ್ಣ ನಾಯ್ಕ್

Sep 21, 2026 - 20:29
 0  204
ಶಿರಸಿ-ಸಿದ್ದಾಪುರದ 225 ಸೇರಿ ಜಿಲ್ಲೆಯ 604 ಹಳ್ಳಿಗಳಿಗೆ ಕಸ್ತೂರಿರಂಗನ್ ಕಂಟಕ: ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಭೀಮಣ್ಣ ನಾಯ್ಕ್
ಆಪ್ತ ನ್ಯೂಸ್ ಬೆಂಗಳೂರು (ವಿಧಾನಸಭೆ ಕಲಾಪ):
ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿರಂಗನ್ ಸಮಿತಿ ವರದಿಯಿಂದ ಮಲೆನಾಡು ಭಾಗದ ಜನಸಾಮಾನ್ಯರು ಹಾಗೂ ರೈತರಿಗೆ ತೀವ್ರ ಅನ್ಯಾಯವಾಗಲಿದ್ದು, ಈ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ್ ವಿಧಾನಸಭೆಯಲ್ಲಿ ಬಲವಾಗಿ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 21ರಂದು ನಡೆದ ಕಲಾಪದಲ್ಲಿ ಮಲೆನಾಡಿನ ರೈತರ ಪರವಾಗಿ ಧ್ವನಿ ಎತ್ತಿದ ಅವರು, ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕಗಳ ಬಗ್ಗೆ ಹಾಗೂ ಇದರಿಂದ ಜಿಲ್ಲೆಯ ಮೇಲಾಗುವ ಭೀಕರ ಪರಿಣಾಮಗಳ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು.

ಅತಂತ್ರ ಸ್ಥಿತಿಯಲ್ಲಿ 604 ಹಳ್ಳಿಗಳು:
ವರದಿಯಿಂದ ಬಾಧಿತವಾಗುವ ರಾಜ್ಯದ 10 ಜಿಲ್ಲೆಗಳ ಪೈಕಿ ನಮ್ಮ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಬರೋಬ್ಬರಿ 604 ಹಳ್ಳಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅದರಲ್ಲೂ ವಿಶೇಷವಾಗಿ ಶಿರಸಿ-ಸಿದ್ದಾಪುರ ಭಾಗದ 225 ಹಳ್ಳಿಗಳು ನೇರ ಅಪಾಯದಲ್ಲಿವೆ ಎಂದು ಅವರು ಸದನದ ಗಮನಕ್ಕೆ ತಂದರು. ಈ ಭಾಗದ ಜನರ ಬದುಕು ವರದಿಯ ಜಾರಿಯಿಂದ ಸಂಪೂರ್ಣ ಅತಂತ್ರವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಒಕ್ಕಲೆಬ್ಬಿಸುವ ಭೀತಿಯಲ್ಲಿ ಸಾವಿರಾರು ಅರಣ್ಯವಾಸಿಗಳು:
ಸ್ವಾತಂತ್ರ್ಯ ಪೂರ್ವದಿಂದಲೂ ತಲೆತಲೆಮಾರುಗಳಿಂದ ಅರಣ್ಯ ಹಾಗೂ ಕೃಷಿ ಭೂಮಿಯನ್ನು ನಂಬಿ ಬದುಕುತ್ತಿರುವ, ಸಾಗುವಳಿ ಮಾಡುತ್ತಿರುವ 70,000 ದಿಂದ 80,000 ಸಾಂಪ್ರದಾಯಿಕ ರೈತರು ಮತ್ತು ಅರಣ್ಯವಾಸಿಗಳು ಈ ವರದಿಯಿಂದಾಗಿ ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ದಶಕಗಳಿಂದ ನೆಲೆ ಕಂಡುಕೊಂಡಿರುವ ಜನರನ್ನು ಒಕ್ಕಲೆಬ್ಬಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜನರಿಗೆ ಉಳಿದಿರುವುದು ಕೇವಲ ಶೇ. 18ರಷ್ಟು ಭೂಮಿ ಮಾತ್ರ:
ಜಿಲ್ಲೆಯ ಭೌಗೋಳಿಕ ವಾಸ್ತವವನ್ನು ಸರ್ಕಾರದ ಮುಂದಿಟ್ಟ ಶಾಸಕರು, "ಜಿಲ್ಲೆಯಲ್ಲಿ ಈಗಾಗಲೇ ಸರಿಸುಮಾರು ಶೇ. 82ರಷ್ಟು ಭೂಮಿ ಅರಣ್ಯ ಪ್ರದೇಶದಿಂದ ಕೂಡಿದೆ. 18 ರಿಂದ 20 ಲಕ್ಷ ಜನಸಂಖ್ಯೆ ಬದುಕಲು ಕೇವಲ ಶೇ. 18ರಷ್ಟು ಭೂಮಿ ಮಾತ್ರ ಉಳಿದಿದೆ. ಹೀಗಿರುವಾಗ ಮತ್ತೆ ಕಸ್ತೂರಿರಂಗನ್ ವರದಿ ಜಾರಿಯಾದರೆ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ" ಎಂದು ಎಚ್ಚರಿಸಿದರು.

ಬೇಡ್ತಿ, ಅಘನಾಶಿನಿ ತೀರದ ರೈತರಲ್ಲಿ ಹೆಚ್ಚಿದ ಆತಂಕ:
ಜಿಲ್ಲೆಯ ಜೀವನಾಡಿಗಳಾದ ಬೇಡ್ತಿ ಮತ್ತು ಅಘನಾಶಿನಿ ನದಿ ಪಾತ್ರದ ಪ್ರದೇಶಗಳನ್ನು ಉಲ್ಲೇಖಿಸಿದ ಅವರು, ಈ ಭಾಗದ ಪರಿಸರ ಹಾಗೂ ಇಲ್ಲಿನ ಸ್ಥಳೀಯ ರೈತರು ವರದಿಯ ಜಾರಿಯ ಭೀತಿಯಿಂದ ಕಂಗಾಲಾಗಿದ್ದಾರೆ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನರ ಬದುಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವರದಿ ಸಂಪೂರ್ಣ ಕೈಬಿಡಲು ಆಗ್ರಹ:
ಕೊನೆಯದಾಗಿ, ಮಲೆನಾಡು ಭಾಗದ ಜನಸಾಮಾನ್ಯರು, ಕೃಷಿಕರು ಹಾಗೂ ಅರಣ್ಯವಾಸಿಗಳ ಬದುಕು ಮತ್ತು ಜೀವನೋಪಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಮೂಲಕ ಮಲೆನಾಡಿಗರ ಆತಂಕವನ್ನು ದೂರ ಮಾಡಿ, ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ್ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0