ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ‘ತೆವಲು’ ಕಥೆ; ಇಬ್ಬರ ನಡುವಿನ ವಾಗ್ಯುದ್ಧಕ್ಕೆ ಕಾರಣವಾದ ಒಂದೇ ಒಂದು ಪದ!
ಶಬ್ದದ ಅರ್ಥದ ಸುತ್ತ ಚರ್ಚೆ; ರಾಜಕೀಯ ಬೆಂಬಲಿಗರ ನಡುವೆ ಪರ-ವಿರೋಧದ ವಾದ | ಇಬ್ಬರೂ ಸ್ವಲ್ಪ ಸಂಯಮ ವಹಿಸಬೇಕಿತ್ತು ಎಂಬ ಸಾರ್ವಜನಿಕ ಅಭಿಪ್ರಾಯ
ಆಪ್ತ ನ್ಯೂಸ್ ಶಿರಸಿ:
ಸಾಮಾಜಿಕ ಜಾಲತಾಣದಲ್ಲಿ ಇದೀಗ ಒಂದೇ ಒಂದು ಪದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದುವೇ ‘ತೆವಲು’! ರಾಜಕೀಯ ಪಕ್ಷವೊಂದರೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಬಳಸಿದ ಈ ಪದಕ್ಕೆ ಯುವ ಹೋರಾಟಗಾರ ನೀಡಿದ ತಿರುಗೇಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಏನಿದು ‘ತೆವಲು’ ವಿವಾದ?
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ, ಕಾಮಗಾರಿ ವಿಳಂಬದ ಕುರಿತು ಆಡಳಿತ ಯಂತ್ರದ ಗಮನ ಸೆಳೆಯುತ್ತಿರುವ ಯುವಕ ಸುಪ್ರೀತ್ ಹೆಗಡೆ ಅವರು, ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉಲ್ಲೇಖಿಸಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪ್ರದೀಪ್ ಹೆಗಡೆ ಅವರು ಕಾಮೆಂಟ್ ಮಾಡುವ ಸಂದರ್ಭದಲ್ಲಿ ‘ತೆವಲು’ ಎಂಬ ಪದವನ್ನು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಸುಪ್ರೀತ್ ಹೆಗಡೆ ಅವರು ನೀಡಿದ ಉತ್ತರದಲ್ಲಿ ವೈಯಕ್ತಿಕ ವಿಚಾರವನ್ನೂ ಪ್ರಸ್ತಾಪಿಸಿದ್ದು, ಅಲ್ಲಿಂದ ಇಬ್ಬರ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ.
ರಾಜಕೀಯ ಬಣ್ಣ ಪಡೆದ ಕಾಮೆಂಟ್ ಸಮರ
ಪ್ರದೀಪ್ ಹೆಗಡೆ ಅವರ ಕಾಮೆಂಟ್ನಲ್ಲಿ ಬಳಕೆಯಾದ ‘ತೆವಲು’ ಪದವನ್ನು ಸಮರ್ಥಿಸಿಕೊಂಡು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಕೆಲವು ಯುವಕರು ಹಾಗೂ ವ್ಯಕ್ತಿಗಳು ಸುಪ್ರೀತ್ ಹೆಗಡೆ ವಿರುದ್ಧ ಪ್ರತಿಕ್ರಿಯೆ ನೀಡಿದರು. ಮತ್ತೊಂದೆಡೆ, ಸುಪ್ರೀತ್ ಅವರ ಪರವಾಗಿ ಕಾಂಗ್ರೆಸ್ ಒಲವು ಹೊಂದಿರುವ ಕೆಲವರು ಕಾಮೆಂಟ್ಗಳ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಹೀಗೆ ಇಬ್ಬರ ನಡುವಿನ ವೈಯಕ್ತಿಕ ವಾಗ್ವಾದಕ್ಕೆ ರಾಜಕೀಯ ಬಣ್ಣವೂ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳಿಗೆ ವೇದಿಕೆಯಾಗಿದೆ.
‘ತೆವಲು’ ಪದದ ಅರ್ಥವೇನು?
ಈ ವಿವಾದದ ನಡುವೆ ‘ಆಪ್ತ ನ್ಯೂಸ್’ ಕನ್ನಡ ನಿಘಂಟಿನ ನೆರವಿನಿಂದ ‘ತೆವಲು’ ಪದದ ಅರ್ಥವನ್ನು ಪರಿಶೀಲಿಸಿದೆ.
ಕನ್ನಡ ರತ್ನಕೋಶದ ಪ್ರಕಾರ ‘ತೆವಲು’ ಪದಕ್ಕೆ ಬೇನೆ, ವ್ಯಾಧಿ, ತೀಟೆ, ಬೆದೆ, ನಸೆ, ಉತ್ಕಟವಾದ ಇಚ್ಛೆ, ಗೀಳು ಹಾಗೂ ಚಟ ಎಂಬ ಹಲವು ಅರ್ಥಗಳಿವೆ.
ಸಾಮಾನ್ಯ ಬಳಕೆಯಲ್ಲಿ ಈ ಪದವನ್ನು ಯಾವ ಸಂದರ್ಭದಲ್ಲೂ, ಯಾವ ಧಾಟಿಯಲ್ಲಿ ಬಳಸಲಾಗಿದೆ ಎಂಬುದರ ಆಧಾರದಲ್ಲಿ ಅದರ ಅರ್ಥ ಮತ್ತು ಗ್ರಹಿಕೆ ಬದಲಾಗಬಹುದು. ಹೀಗಾಗಿ ಪದದ ನಿಘಂಟಿನ ಅರ್ಥವೇ ಬೇರೆ, ವ್ಯಕ್ತಿಯೊಬ್ಬರಿಗೆ ಅದರಿಂದ ಉಂಟಾಗುವ ಭಾವನೆಯೇ ಬೇರೆ ಎಂಬುದನ್ನು ಗಮನಿಸಬೇಕಿದೆ.
ಕೊನೆಯ ಹನಿ: ಪದ ಬಳಕೆಯಲ್ಲಿ ಸಂಯಮವೂ ಮುಖ್ಯ
ಪ್ರದೀಪ್ ಹೆಗಡೆ ಅವರು ಸಾರ್ವಜನಿಕವಾಗಿ ಕಾಮೆಂಟ್ ಮಾಡುವ ಸಂದರ್ಭದಲ್ಲಿ ‘ತೆವಲು’ ಎಂಬ ಪದ ಬಳಸುವ ಮೊದಲು ಸ್ವಲ್ಪ ಯೋಚಿಸಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ರಾಜಕೀಯವಾಗಿ ಗುರುತಿಸಿಕೊಂಡಿರುವವರು ಅಥವಾ ಸಾರ್ವಜನಿಕ ಚರ್ಚೆಯಲ್ಲಿ ಪಾಲ್ಗೊಳ್ಳುವವರು ಪದಗಳ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕೆಂಬ ನಿರೀಕ್ಷೆಯೂ ಇದೆ.
ಅದೇ ರೀತಿ, ಶಿರಸಿ-ಹಾವೇರಿ ರಸ್ತೆ ಕಾಮಗಾರಿಯ ವಿಚಾರದಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಾ, ಹೋರಾಟದ ಮೂಲಕ ಗಮನ ಸೆಳೆದಿರುವ ಸುಪ್ರೀತ್ ಹೆಗಡೆ ಅವರೂ ಆಕ್ರೋಶದ ಭರದಲ್ಲಿ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಸಂಯಮ ವಹಿಸಬಹುದಿತ್ತು ಎಂಬ ಅಭಿಪ್ರಾಯಗಳಿವೆ.
ಒಟ್ಟಿನಲ್ಲಿ, ಸಾರ್ವಜನಿಕ ಸಮಸ್ಯೆಗಳ ಕುರಿತು ನಡೆಯಬೇಕಾದ ಚರ್ಚೆ ವೈಯಕ್ತಿಕ ನಿಂದನೆ ಮತ್ತು ಪ್ರತಿಷ್ಠೆಯ ಕಾಳಗಕ್ಕೆ ತಿರುಗಬಾರದು. ಪ್ರಶ್ನೆ ಕೇಳುವ ಹಕ್ಕು ಎಷ್ಟು ಮುಖ್ಯವೋ, ಉತ್ತರಿಸುವಾಗ ಭಾಷೆಯ ಘನತೆ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯುತ ಪದ ಬಳಕೆಯೂ ಅಗತ್ಯ ಎಂಬುದನ್ನು ಈ ‘ತೆವಲು’ ವಿವಾದ ಮತ್ತೊಮ್ಮೆ ನೆನಪಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0