ನಮ್ಮಪ್ಪನ ಕಾಲದವರು ಗೆದ್ದ ಬೇಡ್ತಿ-ಅಘನಾಶಿನಿ ಹೋರಾಟದಲ್ಲಿ ನಾವು ಸೋಲಬಾರದು!

ನಮ್ಮೂರಿಗೆ ಹೋಗಲಾಗದ, ಈ ಊರಿನಲ್ಲಿ ಇರಲಾಗದ ಸ್ಥಿತಿಗೆ ತಲುಪುವ ಮುನ್ನವೇ ನಮ್ಮ ಉತ್ತರ ಕನ್ನಡ, ನಮ್ಮ ಬೇಡ್ತಿ, ನಮ್ಮ ಅಘನಾಶಿನಿ, ನಮ್ಮ ಪಶ್ಚಿಮ ಘಟ್ಟದ ರಕ್ಷಣೆಗೆ ಧ್ವನಿ ಎತ್ತಲೇಬೇಕು. ನಮ್ಮಪ್ಪನಿಗೆ ಆಗಿದ್ದನ್ನು ನಾವು ಮಾಡಲಿಲ್ಲ ಎನ್ನುವ ಹಣೆಪಟ್ಟಿಯಿಂದ ಮುಕ್ತರಾಗಲು, ಈ ಹೋರಾಟದಲ್ಲಿ ಭಾಗಿಯಾಗೋಣ. ನಮ್ಮಪ್ಪನ ಆಸೆಯನ್ನೂ ಉಳಿಸಿಕೊಳ್ಳೋಣ, ನಮ್ಮ ಮಕ್ಕಳ ಭವಿಷ್ಯವನ್ನೂ ರಕ್ಷಿಸಿಡೋಣ.

Oct 9, 2026 - 12:54
 0  261
ನಮ್ಮಪ್ಪನ ಕಾಲದವರು ಗೆದ್ದ ಬೇಡ್ತಿ-ಅಘನಾಶಿನಿ ಹೋರಾಟದಲ್ಲಿ ನಾವು ಸೋಲಬಾರದು!

✍🏻ರಾಜೀವ ಹೆಗಡೆ

***

ಬೇಡ್ತಿ-ಅಘನಾಶಿನಿ ನದಿಯು ದಶಕಗಳಿಂದಲೂ ಆಡಳಿತದಲ್ಲಿರುವವರ ಕಣ್ಣು ಕುಕ್ಕಿಸುತ್ತಲೇ ಇದೆ. ಆದರೆ ೧೯೯೦ರ ದಶಕದಲ್ಲಿ ಸರ್ಕಾರ ನಡೆಸಿದ ಗಂಭೀರ ಪ್ರಯತ್ನಕ್ಕೆ ನಮ್ಮಪ್ಪನ ಕಾಲದವರು ಬೀದಿಗಿಳಿದು ಸರ್ಕಾರಕ್ಕೆ ನಡುಕ ಹುಟ್ಟಿಸಿದ್ದರು. ಈ ಯೋಜನೆಗೆ ಕೈ ಹಾಕಿದರೆ ಹುಷಾರ್‌ ಎನ್ನುವ ಎಚ್ಚರಿಕೆ ನೀಡಿದ್ದರು. ಈಗ ನಮ್ಮ ಹಿರಿಯರು ಖುಷಿಯಿಂದ ನಿವೃತ್ತಿ ಜೀವನ ನಡೆಸಲು ಹಾಗೂ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ಅವರ ಮಕ್ಕಳು ಬೀದಿಗಿಳಿಯುವ ಸಮಯ ಬಂದಿದೆ. ಒಂದೊಮ್ಮೆ ಇಂದು ನಾವು ಈ ಹೋರಾಟಕ್ಕೆ ಮುಂದಡಿ ಇಡದಿದ್ದರೆ, ಹಿಂದಿನ ಹಾಗೂ ಮುಂದಿನ ಜನಾಂಗವು ನಮ್ಮನ್ನು ಕ್ಷಮಿಸಲಾರದು.

ಈ ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಹಾಗೂ ಕರಾವಳಿಯನ್ನು ಹೊಂದಿದ್ದರೂ, ಕರಾವಳಿ ಅಥವಾ ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತರ ಕನ್ನಡಕ್ಕೆ ಮೊದಲ ಆದ್ಯತೆ ದೊರೆಯುವುದಿಲ್ಲ. ನಮ್ಮ ಜಿಲ್ಲೆಯ ಹೆಸರಲ್ಲಿ ಉತ್ತರ ಇರುವುದರಿಂದ, ದಕ್ಷಿಣ ಕರ್ನಾಟಕಕ್ಕೂ ಸೇರುವುದಿಲ್ಲ. ನಮ್ಮೂರಿನ ವಿಶಿಷ್ಟ ಕಾರಣಗಳಿಂದ ಉತ್ತರ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಕೆಲವರಿಗೆ ಇಷ್ಟವಾಗುವುದಿಲ್ಲ. ಈ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ತಾಲೂಕುಗಳಿದ್ದರೂ, ಅತಿವೃಷ್ಟಿಯ ಬೆಳೆಹಾನಿಯ ಪರಿಹಾರ ಅಥವಾ ವಿಮೆಯು ನಮ್ಮ ಜಿಲ್ಲೆಗಳ ತಾಲೂಕಿಗೆ ನೆಪ ಮಾತ್ರಕ್ಕೆ ಬರುತ್ತದೆ. ಮಳೆಯ ಪ್ರಮಾಣವೂ ವರ್ಷದ ಸರಾಸರಿಯಲ್ಲಿ ಅರ್ಧಕ್ಕಿಂತ ಕಡಿಮೆಯಾಗಿದ್ದರೂ, ಬರ ಪರಿಹಾರದ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಜಿಲ್ಲೆಗೆ ಒಳ್ಳೆಯ ಆಸ್ಪತ್ರೆ ಕೊಡಿ ಎನ್ನುವ ದಶಕಗಳ ಕೂಗಿಗೆ ಸ್ಪಂದಿಸದಿದ್ದರೂ, ಪ್ರತಿ ದಿನ ನಮ್ಮವರನ್ನು ಕಳೆದುಕೊಳ್ಳುತ್ತಲೇ ಕ್ಷಣ ಕ್ಷಣವೂ ಹೋರಾಡುತ್ತಿದ್ದೇವೆ. ಉತ್ತಮ ಕಾಲೇಜು, ಶಿಕ್ಷಣ ಸಂಸ್ಥೆಯ ಅಗತ್ಯತೆ ಬಗ್ಗೆ ಧ್ವನಿ ಎತ್ತಿ ಸುಸ್ತಾದರೂ, ಈ ರಾಜ್ಯದ ಬುದ್ಧಿವಂತರ ಹಾಗೂ ಸುಶಿಕ್ಷಿತರ ಜಿಲ್ಲೆಗಳಲ್ಲಿ ಟಾಪ್‌-೩ಯಲ್ಲಿ ನಾವಿರುತ್ತೇವೆ. ಏಕೆಂದರೆ ನಾವು ಉತ್ತರ ಕನ್ನಡಿಗರು ಸಂಘರ್ಷವನ್ನೇ ಬದುಕಾಗಿಸಿಕೊಂಡು ಬಂದಿದ್ದೇವೆ. ಹೀಗಾಗಿ ಶಾಲೆಗಾಗಿ ಐದು ಕಿ.ಮೀ ನಡೆಯುವುದು, ಸರ್ಕಾರಿ ಕೆಲಸಕ್ಕಾಗಿ ನೂರು ಕಿ.ಮೀ ಅಲೆದಾಡುವುದು, ಆಸ್ಪತ್ರೆಗಾಗಿ ಸಾವಿರ ಕಿ.ಮೀ ಓಡುವುದು ಸರ್ವೆ ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಸರ್ಕಾರವು ʼಗೌರವಯುತʼವಾಗಿ ನಮ್ಮನ್ನು ನಡೆಸಿಕೊಂಡಿದೆ. ಇಷ್ಟಾಗಿಯೂ ನಾವು ಉತ್ತರ ಕನ್ನಡದ ಮಂದಿ ಆಕ್ಷರಶಃ ಶಾಂತಿ ಪ್ರಿಯರು.

ಆದರೆ ಎಲ್ಲದಕ್ಕೂ ಮಿತಿ ಎನ್ನುವುದಿರುತ್ತದೆ. ೧೯೯೦ರ ಕಾಲಘಟ್ಟದಲ್ಲಿ ಇದೇ ರೀತಿ ನಮ್ಮ ಉತ್ತರ ಕನ್ನಡದ ಜೀವನಾಡಿ, ಒಡಲು ಬೇಡ್ತಿ-ಅಘನಾಶಿನಿಗೆ ಕೈ ಹಾಕಿದ್ದಾಗ, ಶಾಂತಿ ಪ್ರಿಯರ ಜಿಲ್ಲೆಯು ಕೆರಳಿ ನಿಂತಿತ್ತು. ಜಾತಿ, ಪಕ್ಷ, ಸಿದ್ಧಾಂತಗಳನ್ನೆಲ್ಲ ಬದಿಗಿಟ್ಟು, ಅಂದು ನಮ್ಮಪ್ಪನ ಕಾಲಘಟ್ಟದವರು ಬೀದಿಗೆ ಇಳಿದಿದ್ದರು. ಈಗ ಅಂತಹದ್ದೇ ಇನ್ನೊಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ನಾವು ಈ ಹೋರಾಟಕ್ಕೆ ಜೊತೆಯಾಗಿ ನಿಲ್ಲದಿದ್ದರೆ, ಭವಿಷ್ಯದ ಉತ್ತರ ಕನ್ನಡವು ಭೀಕರವಾಗಿರಲಿದೆ. ಸರ್ಕಾರವು ನಮ್ಮ ಜಿಲ್ಲೆಯ ಜನರನ್ನು ಗೌರವಯುತವಾಗಿ ನಡೆಸಿಕೊಂಡು, ಮಾನವೀಯ ಹಕ್ಕನ್ನು ಉತ್ತರ ಕನ್ನಡಿಗರು ಕೂಡ ಹೊಂದಿದ್ದಾರೆ ಎನ್ನುವುದನ್ನು ನೆನಪಿಸಿಕೊಡಲೇಬೇಕು.

ಮೇಲ್ನೋಟಕ್ಕೆ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯು ಪಕ್ಕದ ಜಿಲ್ಲೆಯ ಕುಡಿಯುವ ನೀರಿನ ದಣಿವು ಕಡಿಮೆ ಮಾಡುವ ಮಾನವೀಯ ಕೆಲಸ ಎಂದೆನಿಸಬಹುದು. ವಿಪರ್ಯಾಸವೆಂದರೆ, ಇದಕ್ಕೂ ಮೊದಲು ವಿವಿಧ ಉದ್ದೇಶಗಳಿಗೆ ಬಳಸಲು ಪ್ರಯತ್ನಿಸಿ, ಕೊನೆಗೆ ಕುಡಿಯುವ ನೀರಿನ ನೆಪದಲ್ಲಿ ಮತ್ತೆ ಕೈ ಹಾಕುವ ಕೆಲಸವಾಗುತ್ತಿದೆ. ನಮ್ಮೂರಿನ ಜನರ ಬದುಕು ಕಟ್ಟಿಕೊಡುವ ಯೋಜನೆಗಳಿಗೆ ಅರಣ್ಯ ನಾಶದ ನೆಪ ಹುಡುಕುವ ಸರ್ಕಾರವು, ಇಂತಹ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾಡುತ್ತಿದೆ. ಇಂತಹ ಇಬ್ಬಗೆಯ ನೀತಿಯನ್ನು ವಿರೋಧಿಸದೇ ಕುಳಿತರೆ, ಭವಿಷ್ಯದಲ್ಲಿ ಉತ್ತರ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತದೆ. ದಾಂಡೇಲಿ, ಕೊಡಗು ಸೇರಿ ಕೆಲ ಪ್ರವಾಸೋದ್ಯಮ ಜಿಲ್ಲೆಗಳಲ್ಲಾದಂತೆ, ನಮ್ಮೂರಿನ ಜನರು ಬದುಕಲು ಆಗದಂತೆ ಹೊರಗಟ್ಟಿ, ಹೊರ ರಾಜ್ಯದ ರೆಸಾರ್ಟ್‌ ಉದ್ಯಮಿಗಳಿಗೆ ಮೇಯಲು ತಾಣವಾಗಿ ಬದಲಾಗುತ್ತದೆ. ನಮ್ಮೂರಿನ ಪ್ರದೇಶಗಳಲ್ಲಿ ನಾವು ಗೌರವಯುತವಾಗಿ ಬದುಕಲು ಅವಕಾಶ ಕೊಡದಿರುವ ಸರ್ಕಾರಕ್ಕೆ, ಬೇರೆಯವರಿಗೆ ಮೇಯಲು ಕೊಡಲು ಅವಕಾಶ ನೀಡುವುದು ಮಹಾಪರಾಧವಾಗುತ್ತದೆ.

ಇದಲ್ಲದೇ, ನಾವು ಉತ್ತರ ಕನ್ನಡಿಗರಿಂದು ಬೆಂಗಳೂರು ಸೇರಿದ ದೇಶ-ವಿದೇಶದ ವಿವಿಧ ಭಾಗಗಳಲ್ಲಿ ನೆಲೆಸಿರಬಹುದು. ನಮ್ಮೂರು ಹಿರಿಯ ನಾಗರಿಕರ ಅನಾಥಾಶ್ರಮದಂತೆ ಗೋಚರಿಸಬಹುದು. ಈ ವಿಚಾರದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡಿರಬಹುದು. ಆದರೆ ಇವತ್ತಿನ ಎಐ ಕಾಲದ ಉದ್ಯೋಗ ಪ್ರಪಂಚದಲ್ಲಿನ ತಲ್ಲಣವನ್ನು ಗಮನಿಸಿದಾಗ, ಮತ್ತೆ ನಮ್ಮೂರಿನ ನೆಲೆಯತ್ತ ಕಾಲ್ಕೀಳುವ ದಿನಗಳು ದೂರವಿಲ್ಲ. ನಾವು ಮತ್ತೆ ಊರಿಗೆ ಹೋಗುವಾಗ ಉತ್ತರ ಕನ್ನಡದ ಸೊಬಗು, ಜೀವ-ಜಲ ವೈವಿಧ್ಯತೆಯೂ ಅದೇ ರೂಪದಲ್ಲಿಲ್ಲವೆಂದಾದರೆ, ಅಲ್ಲಿಯೂ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವಾಗಲಿದೆ. ಇಂದು ಸರ್ಕಾರದ ಎಲ್ಲ ದೌರ್ಜನ್ಯವನ್ನು ಒಪ್ಪಿಕೊಂಡು ಕಣ್ಮುಚ್ಚಿ ಕುಳಿತರೆ, ಭವಿಷ್ಯದ ಸಂಕಷ್ಟವನ್ನು ಕೂಡ ಎದುರಿಸಲಾಗದೇ ಅಬ್ಬೆಪಾರಿಗಳಾಗಬೇಕಾಗುತ್ತದೆ. ನಮ್ಮ ಜಿಲ್ಲೆಯು ಈಗಾಗಲೇ ಹಲವು ದಶಕಗಳಿಂದ ಅಬ್ಬೆಪಾರಿಯಂತಾಗಿದೆ. ಆದರೂ ನಾವು ಉತ್ತರ ಕನ್ನಡಿಗರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು, ನಾವಿರುವ ಪ್ರತಿ ಕ್ಷೇತ್ರದಲ್ಲೂ ಬೆಳೆದು ನಿಂತಿದ್ದೇವೆ. ಆದರೆ ನಮ್ಮ ಸ್ಥಿತಿಯೂ ಅಬ್ಬೆಪಾರಿಯಾಗುವ ಮೊದಲು, ಎಚ್ಚೆತ್ತಿಕೊಳ್ಳಲೇಬೇಕು.

ನಮ್ಮೂರಿಗೆ ಹೋಗಲಾಗದ, ಈ ಊರಿನಲ್ಲಿ ಇರಲಾಗದ ಸ್ಥಿತಿಗೆ ತಲುಪುವ ಮುನ್ನವೇ ನಮ್ಮ ಉತ್ತರ ಕನ್ನಡ, ನಮ್ಮ ಬೇಡ್ತಿ, ನಮ್ಮ ಅಘನಾಶಿನಿ, ನಮ್ಮ ಪಶ್ಚಿಮ ಘಟ್ಟದ ರಕ್ಷಣೆಗೆ ಧ್ವನಿ ಎತ್ತಲೇಬೇಕು. ನಮ್ಮಪ್ಪನಿಗೆ ಆಗಿದ್ದನ್ನು ನಾವು ಮಾಡಲಿಲ್ಲ ಎನ್ನುವ ಹಣೆಪಟ್ಟಿಯಿಂದ ಮುಕ್ತರಾಗಲು, ಈ ಹೋರಾಟದಲ್ಲಿ ಭಾಗಿಯಾಗೋಣ. ನಮ್ಮಪ್ಪನ ಆಸೆಯನ್ನೂ ಉಳಿಸಿಕೊಳ್ಳೋಣ, ನಮ್ಮ ಮಕ್ಕಳ ಭವಿಷ್ಯವನ್ನೂ ರಕ್ಷಿಸಿಡೋಣ.

ದಯವಿಟ್ಟು ಬೇಡ್ತಿ-ಅಘನಾಶಿನಿ ರಕ್ಷಣೆಯ ಹೋರಾಟದಲ್ಲಿ ಭಾಗಿಯಾಗಿ....
ನಮ್ಮ ನದಿ, ನಮ್ಮ ನೀರು, ನಮ್ಮ ಹಕ್ಕು....

ಪ್ರತಿಭಟನೆಯ ಸ್ಥಳ: ಬೆಂಗಳೂರಿನ ಫ್ರೀಡಂ ಪಾರ್ಕ್‌
ದಿನಾಂಕ, ಸಮಯ: ಅಕ್ಟೋಬರ್‌ 10, ಶನಿವಾರ ಬೆಳಗ್ಗೆ 9.30ರಿಂದ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0